ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬುಧವಾರ ಮಂಡಿಸಿದ ಹೊಸ ಆಯವ್ಯಯದಲ್ಲಿ ಹೊಸ ತೆರಿಗೆ ಪದ್ಧತಿಯನ್ನು ಆಳವಡಿಸಿಕೊಂಡರೆ 7 ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ಇರಲ್ಲ ಎಂದು ಘೋಷಿಸಿದೆ. ಹೊಸ ತೆರಿಗೆ ಪದ್ಧತಿಯನ್ನು ಬಜೆಟ್ನಲ್ಲಿ ಜನಸಾಮಾನ್ಯರಿಗೆ ಕೊಟ್ಟಿರುವ ಉಡುಗೊರೆ ಎಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತಿದೆ.
ಅದರೆ ಹೊಸ ತೆರಿಗೆ ಪದ್ಧತಿಯನ್ನು ಅಳವಡಿಸಿಕೊಂಡರೆ ಹಳೆ ಆದಾಯ ತೆರಿಗೆ ಪದ್ಧತಿಯಲ್ಲಿ ಸಿಗುವ 70 ಆದಾಯ ತೆರಿಗೆ ವಿನಾಯಿತಿಗಳು ಲಭ್ಯ ಆಗಲ್ಲ.
ಹೊಸ ತೆರಿಗೆ ಪದ್ಧತಿಯಲ್ಲಿ ಕೈ ತಪ್ಪಲಿರುವ ತೆರಿಗೆ ವಿನಾಯಿತಿಗಳು ಹೀಗಿವೆ. ಹಳೆ ಪದ್ಧತಿಯಲ್ಲಿ ಲಭ್ಯ ಇರುವ ಈ ಕೆಳಕಂಡ ವಿನಾಯಿತಿಗಳು ಸೇರಿದಂತೆ ಒಟ್ಟು 70 ವಿನಾಯಿತಿಗಳು ಹೊಸ ತೆರಿಗೆ ಪದ್ಧತಿಯಲ್ಲಿ ಸಿಗಲ್ಲ.
ಜೀವವಿಮೆ, ಆರೋಗ್ಯ ವಿಮೆ, ಮನೆ ಸಾಲ, ಉಳಿತಾಯ ಠೇವಣಿ ಮೇಲಿನ ಬಡ್ಡಿಯಿಂದ ಆದಾಯ, ಸಂಸ್ಥೆಗಳಿಗೆ ನೀಡಲಾಗುವ ದೇಣಿಗೆ ಒಳಗೊಂಡಂತೆ ಹಲವು ರೀತಿಯ ತೆರಿಗೆ ವಿನಾಯಿತಿಗಳು ಹೊಸ ತೆರಿಗೆ ಪದ್ಧತಿ ಅಡಿಯಲ್ಲಿ ರದ್ದಾಗಲಿವೆ.
1. ಆದಾಯ ತೆರಿಗೆ ಕಲಂ 80 ಸಿ: ಕಾರ್ಮಿಕರ ಭವಿಷ್ಯ ನಿಧಿಯಲ್ಲಿ ಹೂಡಿಕೆ ( ಇಪಿಎಫ್), ಜೀವ ವಿಮೆ ಕಂತು ಪಾವತಿ, ಸಾರ್ವಜನಿಕ ಪಿಂಚಣಿ ನಿಧಿ (ಪಿಪಿಎಫ್) ಹೂಡಿಕೆ, ಗೃಹ ಸಾಲ ಮರು ಪಾವತಿಯನ್ನು ಆಧಾರಿಸಿ ನೀಡಲಾಗುವ ಆದಾಯ ತೆರಿಗೆ ವಿನಾಯಿತಿ. ಹಳೆ ತೆರಿಗೆ ಪದ್ಧತಿ ಪ್ರಕಾರ ಈ ಕಲಂ ಅಡಿಯಲ್ಲಿ ಗರಿಷ್ಠ ಒಂದೂವರೆ ಲಕ್ಷ ರೂಪಾಯಿವರೆಗೆ ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.
2. ಆದಾಯ ತೆರಿಗೆ ಕಲಂ 80ಸಿಡಿ (1ಬಿ): ಈ ಕಲಂ ಅಡಿಯಲ್ಲಿ ಎನ್ಪಿಎಸ್ ಖಾತೆಯಲ್ಲಿ ಮಾಡಲಾಗುವ ಹೂಡಿಕೆಗೆ ತೆರಿಗೆ ವಿನಾಯಿತಿ ಲಭ್ಯವಾಗುತ್ತದೆ. ಈ ಕಲಂ ಅಡಿಯಲ್ಲಿ ಪಡೆಯಬಹುದಾದ ತೆರಿಗೆ ವಿನಾಯಿತಿಯ ಗರಿಷ್ಠ ಮೊತ್ತ 50 ಸಾವಿರ ರೂಪಾಯಿ.
3.ಆದಾಯ ತೆರಿಗೆ ಕಲಂ 80ಡಿ: ವೈದ್ಯಕೀಯ ವಿಮೆ ಪಾವತಿಗಾಗಿ ನೀಡಲಾಗುವ ತೆರಿಗೆ ವಿನಾಯಿತಿ. ವೈಯಕ್ತಿಕವಾಗಿ ಒಬ್ಬರು 25 ಸಾವಿರ ರೂಪಾಯಿಯಷ್ಟು ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಹಿರಿಯ ನಾಗರಿಕರು 50 ಸಾವಿರ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.
4. ರಜಾ ಕಾಲದ ಪ್ರವಾಸ ಭತ್ಯೆ ಮೇಲೆ ನೌಕರರು ನಾಲ್ಕು ವರ್ಷಕ್ಕೆ ಎರಡು ಬಾರಿ ಪಡೆಯಬಹುದಾದ ತೆರಿಗೆ ವಿನಾಯಿತಿ.
5. ಮನೆ ಬಾಡಿಗೆ ಭತ್ಯೆ ಆಧಾರದಲ್ಲಿ ಸಿಗುವ ಆದಾಯ ತೆರಿಗೆ ವಿನಾಯಿತಿ. ಅಂದರೆ ಮನೆ ಬಾಡಿಗೆ ಪಾವತಿ ಮೊತ್ತವನ್ನು ಉಲ್ಲೇಖಿಸಿ ಪಡೆಯಬಹುದಾದ ತೆರಿಗೆ ವಿನಾಯಿತಿ.
6. ಆದಾಯ ತೆರಿಗೆ ಕಲಂ 80ಟಿಟಿಎ – ಉಳಿತಾಯ ಖಾತೆಗಳ ಬಡ್ಡಿಯಿಂದ ಬರುವ ಆದಾಯದ ಮೇಲೆ ಸಿಗುವ ತೆರಿಗೆ ವಿನಾಯಿಯಿ
7. ಆದಾಯ ತೆರಿಗೆ ಕಲಂ 80ಟಿಟಿಬಿ – ಎಲ್ಲ ರೀತಿಯ ಠೇವಣಿಗಳ ಬಡ್ಡಿಯಿಂದ ಬರುವ ಆದಾಯದ ಮೇಲೆ ಹಿರಿಯ ನಾಗರಿಕರಿಗೆ ಸಿಗುವ ಆದಾಯ ತೆರಿಗೆ ವಿನಾಯಿತಿ
8. ಮನರಂಜನಾ ಭತ್ಯೆ ಆಧರಿಸಿ ಉದ್ಯೋಗಿಗಳು ಪಡೆದುಕೊಳ್ಳಬಹುದಾದ ಆದಾಯ ತೆರಿಗೆ ವಿನಾಯಿತಿ
9. ಆದಾಯ ತೆರಿಗೆ ಕಲಂ 24: ಮನೆ ಸಾಲದ ಬಡ್ಡಿ ಪಾವತಿ ಮೇಲೆ ಪಡೆಯಬಹುದಾದ ತೆರಿಗೆ ವಿನಾಯಿತಿ. ಒಂದು ವೇಳೆ ಮನೆ ಸ್ವ ಅನುಭೋಗದಲ್ಲಿದ್ದರೆ ಅಥವಾ ಖಾಲಿಯಾಗಿದ್ದರೆ ಆ ಮನೆಯ ಮೇಲಿನ ಸಾಲದ ಬಡ್ಡಿ ಪಾವತಿ ಮೇಲೆ ಸಿಗುವ ತೆರಿಗೆ ವಿನಾಯಿತಿ.
10. ಆದಾಯ ತೆರಿಗೆ ಕಲಂ 80 ಡಿ ಮತ್ತು 80ಡಿಡಿಬಿ: ಒಂದು ವೇಳೆ ಸ್ವತಃ ವಿಕಲಚೇತನರಾಗಿದ್ದರೆ ಅಥವಾ ಅವಲಂಬಿತರು ವಿಕಲಚೇತನರಾಗಿದ್ದರೆ ಅವರ ವೈದ್ಯಕೀಯ ಖರ್ಚಿನ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
11. ಆದಾಯ ತೆರಿಗೆ ಕಲಂ 80ಇ: ಶೈಕ್ಷಣಿಕ ಸಾಲದ ಬಡ್ಡಿ ಪಾವತಿ ಮೇಲೆ ಸಿಗುವ ತೆರಿಗೆ ವಿನಾಯಿತಿ.
12 ಆದಾಯ ತೆರಿಗೆ ಕಲಂ 80ಜಿ: ದಾನ, ದೇಣಿಗೆ ಕೊಟ್ಟರೆ ಪಡೆಯಬಹುದಾದ ಆದಾಯ ತೆರಿಗೆ ವಿನಾಯಿತಿ.
13. ಆದಾಯ ತೆರಿಗೆ ಕಲಂ 80ಸಿಸಿಸಿ: ಪಿಂಚಣಿ ಯೋಜನೆಗೆ ಪಾವತಿ ಮಾಡಲಾಗುವ ಕಂತಿನ ಮೇಲೆ ಸಿಗುವ ತೆರಿಗೆ ವಿನಾಯಿತಿ
14. ಆದಾಯ ತೆರಿಗೆ ಕಲಂ 80ಇಇ: ವಸತಿ ಅಡಮಾನ ಸಾಲದ ಮೇಲಿನ ಬಡ್ಡಿ ಪಾವತಿಗೆ ಸಿಗುವ ಆದಾಯ ತೆರಿಗೆ ವಿನಾಯಿತಿ.
15. ಆದಾಯ ತೆರಿಗೆ ಕಲಂ 80ಇಇಎ: ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಸಿಗುವ ಆದಾಯ ತೆರಿಗೆ ವಿನಾಯಿತಿ. ಇದರಡಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಪಡೆಯಲು ಅವಕಾಶ ಇದೆ.
16. ಆದಾಯ ತೆರಿಗೆ ಕಲಂ 80ಇಇಬಿ: ಎಲೆಕ್ಟ್ರಿಕ್ ವಾಹನ ಖರೀದಿ ಸಾಲದ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
17. ಆದಾಯ ತೆರಿಗೆ ಕಲಂ 80ಜಿಜಿ: ಬಾಡಿಗೆ ಪಡೆದಿರುವ ಆಸ್ತಿ ಮೇಲೆ ಪಾವತಿಸಲಾಗುವ ಬಾಡಿಗೆ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
18. ಆದಾಯ ತೆರಿಗೆ ಕಲಂ 80ಜಿಜಿಎ: ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಮತ್ತು ಅರಣ್ಯೀಕರಣಕ್ಕಾಗಿ ನೀಡಲಾಗುವ ದೇಣಿಗೆ ಮೇಲೆ ಸಿಗುವ ಆದಾಯ ತೆರಿಗೆ ವಿನಾಯಿತಿ.
19. ಆದಾಯ ತೆರಿಗೆ ಕಲಂ 80ಜಿಜಿಸಿ: ರಾಜಕೀಯ ಪಕ್ಷಗಳಿಗೆ ನೀಡಲಾಗುವ ದೇಣಿಗೆ ಮೇಲೆ ಸಿಗುವ ತೆರಿಗೆ ವಿನಾಯಿತಿ.
20. ಆದಾಯ ತೆರಿಗೆ ಕಲಂ 80ಐಎ: ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಲಾಭದ ಮೇಲೆ ಪಡೆಬಹುದಾದ ತೆರಿಗೆ ವಿನಾಯಿತಿ.