ಹಳೆಯ ವೈಷಮ್ಯ ಹಿನ್ನೆಲೆ ಮಾರಕಾಸ್ತ್ರದಿಂದ ಬಿಜೆಪಿ ಕಾರ್ಯಕರ್ತನನ್ನು ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಗ್ರಾಮದಲ್ಲಿ ನಡೆದಿದೆ.
ಹಿಡಕಲ್ ಡ್ಯಾಂ ಸಮೀಪದ ಹೊಸಪೇಟ ನಿವಾಸಿ ಪರಶುರಾಮ ಹಲಕರ್ಣಿ(32) ಕೊಲೆಯಾದ ವ್ಯಕ್ತಿ. ಪರುಶುರಾಮನನ್ನು ಮೂವರು ದುಷ್ಕರ್ಮಿಗಳು ಸೇರಿ ಗ್ರಾಮದ ಆಂಜನೇಯನ ಮಂದಿರದ ಹತ್ತಿರ ವಾಹನವನ್ನು ನಿಲ್ಲಿಸಿ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.
ಮೂವರು ಆರೋಪಿಗಳಲ್ಲಿ ಮಂಜುನಾಥ್ ಪುಟ್ಜನೆ(24) ಹಾಗೂ ಕೆಂಪಣ್ಣ ನೆಸರಗಿ(30) ಪೊಲೀಸರಿಗೆ ಶರಣಾಗಿದ್ದು, ಇನ್ನೊಬ್ಬ ಆರೋಪಿ ಬಸವರಾಜ್ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಲು ಜಾಲ ಬೀಸಿದ್ದಾರೆ. ಹತ್ಯೆಗೊಳಗಾದ ಯುವಕ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದನು.
ಪ್ರಸ್ತುತ ಮೃತನ ಪತ್ನಿ ಕೊಲೆ ವಿರುದ್ಧ ದೂರು ಕೊಟ್ಟಿದ್ದಾರೆ. ಕೊಲೆಗೆ ಹಳೆಯ ವೈಷಮ್ಯ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.