ಒಟಿಪಿ ನೀಡಲು ತಡವಾಗಿದ್ದಕ್ಕೆ ಓಲಾ ಚಾಲಕ (ಡ್ರೈವರ್) ಒಬ್ಬರು ಪ್ರಯಾಣಿಕನನ್ನು ಕೊಂದಿರುವ ಅಘಾತಕಾರಿ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.
ಭಾನುವಾರ ಈ ಘಟನೆ ನಡೆದಿದ್ದು, ತಡವಾಗಿ ವರದಿಯಾಗಿದೆ. ಹತ್ಯೆಯಾದ ವ್ಯಕ್ತಿಯಾದ ಐಟಿ ಉದ್ಯೋಗಿಯಾಗಿದ್ದು, ಅವರನ್ನು ಉಮೇಂದ್ರ ಎಂದು ಗುರುತಿಸಲಾಗಿದೆ. ಇವರು ಕೊಯಮತ್ತೂರ್ನಲ್ಲಿ ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಉಮೇಂದ್ರ ಅವರು ಪತ್ನಿ ಹಾಗೂ ಮಕ್ಕಳ ಸಮೇತ ಚಲನಚಿತ್ರ ನೋಡಿ ಹೊರ ಬಂದಿದ್ದರು. ಮನೆಗೆ ತೆರಳಲು ಪತ್ನಿ ಓಲಾ ಕಾರ್ ಬುಕ್ ಮಾಡಿದ್ದರು.
ಓಲಾ ಕಾರ್ ಚಾಲಕ ಇವರನ್ನು ಪಿಕಪ್ ಮಾಡುವ ವೇಳೆ ಓಟಿಪಿಯಲ್ಲಿ ಗೊಂದಲವುಂಟಾಗಿದೆ. ಈ ವೇಳೆಗಾಗಲೇ ಕಾರಿನ ಒಳಗಡೆ ಕೂತಿದ್ದ ಪತ್ನಿ ಹಾಗೂ ಮಕ್ಕಳನ್ನು ಓಲಾ ಚಾಲಕ ಕಾರಿನಿಂದ ಕೆಳಗಿಳಿಸಿದ್ದ. ಈ ವೇಳೆ ಕುಪಿತಗೊಂಡ ಉಮೇಂದ್ರ ಕಾರಿನ ಬಾಗಿಲಿಗೆ ಕಾಲಿನಿಂದ ಒದ್ದಿದ್ದಾರೆ.
ಇದರಿಂದಾಗಿ ಇಬ್ಬರ ನಡುವೆ ಗಲಾಟೆ ಆರಂಭವಾಗಿದ್ದು, ಕೊನೆಗೆ ಪ್ರಯಾಣಿಕ ಉಮೇಂದ್ರರ ಕೊಲೆಯಲ್ಲಿ ಈ ಗಲಾಟೆ ಅಂತ್ಯವಾಗಿದೆ.
ವಿಚಾರಣೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಓಲಾ ಚಾಲಕ ಉಮೇಂದ್ರ ಅವರ ಮೊಬೈಲ್ ಎಸೆದು ಅವರ ಮೇಲೆ ನಿರಂತರವಾಗಿ ಹಲ್ಲೆ ಮಾಡಿದ್ದಾನೆ. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು ಎಂದು ಹೇಳಿದ್ದಾರೆ.
ಕ್ಯಾಬ್ ಚಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.