ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಂಗಳವಾರ ಪ್ರಚಾರ ತೆಗೆದುಕೊಳ್ಳಲು ಹೋಗಿ ಸಿಎಂ ಬೊಮ್ಮಾಯಿ ಅವರಿಂದ ಪೇಚಿಗೀಡಾಗಿರುವ ಘಟನೆ ನಡೆದಿದೆ.
ಮಂಗಳವಾರ ಸಿಎಂ ಬೊಮ್ಮಾಯಿ ಹಾಗೂ ಸಚಿವ ಎಸ್ಟಿ ಸೋಮಶೇಖರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದರು. ಸುದ್ದಿಗೋಷ್ಠಿ ಮುಗಿದ ಬಳಿಕ ಅಲ್ಲಿಗೆ ಬಂದಿದ್ದ ಸಂಸದ ಪ್ರತಾಪ್ ಸಿಂಹ ತಮ್ಮ ಕ್ಷೇತ್ರದ ಕೆಲಸಕ್ಕಾಗಿ ಸಿಎಂ ಬೊಮ್ಮಾಯಿಯವರಿಗೆ ಡಾಕ್ಯುಮೆಂಟ್ ನೀಡಿದ್ದಾರೆ.
ಬೊಮ್ಮಾಯಿಯವರೂ ಪ್ರತಾಪ್ಸಿಂಹ ಅವರ ಡಾಕ್ಯುಮೆಂಟ್ ಸ್ವೀಕರಿಸಿದ್ದರು. ಈ ವೇಳೆ ಪ್ರತಾಪ್ ಸಿಂಹ ಸಾಕ್ಷಿಗಾಗಿ ಸೆಲ್ಫಿ ತಗೆದುಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಸ್ವಲ್ಪ ಗರಂ ಆದ ಸಿಎಂ ಬೊಮ್ಮಾಯಿ, ಸಿಂಹರನ್ನು ಕುರಿತು ಅತಿ ಬುದ್ಧಿವಂತರ ಜೊತೆ ಕೆಲಸ ಮಾಡಲು ಆಗಲ್ಲ. ಬೇಕಿದ್ದರೆ ನಿಮ್ಮ ಡಾಕ್ಯುಮೆಂಟ್ ವಾಪಾಸ್ ತೆಗೆದುಕೊಂಡು ಹೋಗಿ ಎಂದು ಗದರಿದ್ದಾರೆ.
ಈ ಅನಿರೀಕ್ಷಿತ ಸಂಗತಿಯಿಂದ ಪೇಚಿಗೀಡಾದ ಸಂಸದ ಪ್ರತಾಪ್ ಸಿಂಹ ಅವರು ಅಲ್ಲಿಂದ ಕಾಲಿಗೆ ಬುದ್ದಿ ಹೇಳುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.