ದೇಶದಲ್ಲಿ ಸೃಷ್ಠಿಯಾಗಿರುವ ಕೋಮುದ್ವೇಷದ ಉದ್ವೇಗಕ್ಕೆ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ನೀಡಿದ ಹೇಳಿಕೆಯೇ ಕಾರಣ. ನೂಪುರ್ ಶರ್ಮಾ ಅವರು ತಮ್ಮ ಹೇಳಿಕೆಯ ಬಗ್ಗೆ ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಸುಪ್ರಿಂ ಕೋರ್ಟ್ ಹೇಳಿದೆ.
ನೂಪುರ್ ಶರ್ಮಾ ಇಡೀ ದೇಶಾದ್ಯಂತ ಭಾವನೆಗಳ ಮೇಲೆ ಬೆಂಕಿ ಹೊತ್ತಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಈ ಘಟನೆಗಳಿಗೆ ಈಕೆ ಮಾತ್ರವೇ ನೇರ ಕಾರಣ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ನಾವು ಟಿವಿ ಚರ್ಚೆಯನ್ನು ನೋಡಿದ್ದು, ಅದರಲ್ಲಿ ಇವರು ಹೇಗೆ ಪ್ರಚೋದಿಸಿದ್ದಾರೆ ಎಂಬುದನ್ನು ಗಮನಿಸಿದ್ದೇವೆ. ಇವರು ಮಾತನಾಡಿದ ದಾಟಿಯನ್ನು ಗಮನಿಸಿದರೆ, ಇವರು ವಕೀಲೆಯಾಗಿರುವುದು ನಾಚಿಕೆಗೇಡು. ಈಕೇ ಇಡೀ ದೇಶದ ಕ್ಷಮೆ ಕೇಳಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ತಮಗೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ದೆಹಲಿ ಹೈಕೋರ್ಟ್ಗೆ ವರ್ಗಾಯಿಸುವಂತೆ ನೂಪುರ್ ಶರ್ಮಾ ಅವರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಅನಂತರ, ಅವರು ತಮ್ಮ ಅರ್ಜಿಯನ್ನು ವಾಪಾಸು ಪಡೆದುಕೊಂಡಿದ್ದಾರೆ.
ನೀವು ಇತರರ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಿದಾಗ, ಅವರನ್ನು ತಕ್ಷಣವೇ ಬಂಧಿಸಲಾಗುತ್ತದೆ. ಆದರೆ, ಅದು ನಿಮ್ಮ ವಿರುದ್ಧವಾದಾಗ ಯಾರೂ ನಿಮ್ಮನ್ನು ಮುಟ್ಟಲು ಧೈರ್ಯ ಮಾಡಲಿಲ್ಲ ಎಂದು ನ್ಯಾಯಾಧೀಶರು ಇದೇ ವೇಳೆ ಹೇಳಿದ್ದಾರೆ.
ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು, ಪ್ರವಾದಿ ಮಹಮ್ಮದ್ ಅವರನ್ನು ಟಿವಿ ಚರ್ಚೆಯೊಂದರಲ್ಲಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇವರ ಈ ಹೇಳಿಕೆಯನ್ನು ವಿರೋಧಿಸಿ ದೇಶಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿವೆ. ಗಲ್ಫ್ ದೇಶಗಳು ಇವರ ಹೇಳಿಕೆಯನ್ನು ವಿರೋಧಿಸಿ ಆ ದೇಶದಲ್ಲಿನ ಭಾರತೀಯ ರಾಯಭಾರಿಗಳಗೆ ಸಮನ್ಸ್ ಜಾರಿ ಮಾಡಿದ್ದವು.