ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ಪ್ರತಿಕೃತಿಯನ್ನು ನಡುರಸ್ತೆಯಲ್ಲಿ ನೇಣು ಹಾಕಿದ ರೀತಿಯಲ್ಲಿ ನೇತುಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಬೆಳಗಾವಿ ನಿವಾಸಿಗಳಾದ ಮೊಹಮ್ಮದ್ ಶೋಯೆಬ್, ಅಮನ್ ಮೊಕಾಶಿ, ಅರ್ಬಾಜ್ ಮೊಕಾಶಿ ಬಂಧಿತರು.
ಪ್ರವಾದಿ ಮಹಮ್ಮದ್ ಅವರ ಕುರಿತು ನೂಪುರ್ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆ ಖಂಡಿಸಿ, ನಗರದ ಪೋರ್ಟ್ ರಸ್ತೆಯಲ್ಲಿ ಅವರ ಪ್ರತಿಕೃತಿಯನ್ನು ಗಲ್ಲಿಗೇರಿಸಿದ ರೀತಿಯಲ್ಲಿ ನೇತುಹಾಕಲಾಗಿತ್ತು. ಇದನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕೆಲ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದಲ್ಲಿ ಕೆಲ ಕಾಲ ದ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣ ಸಂಬಂಧ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಿದ್ದರು. ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡಿದ ಆರೋಪದಡಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.