ಹಿಂದಿ ಭಾಷೆ ವಿಚಾರವಾಗಿ ಕನ್ನಡದ ಖ್ಯಾತ ನಟ ಸುದೀಪ್ ಹಾಗೂ ಬಾಲಿವುಡ್ನ ಅಜಯ್ ದೇವಗನ್ ನಡುವೆ ಟ್ವಿಟರ್ನಲ್ಲಿ ನಡೆದ ಚರ್ಚೆಗೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಕನ್ನಡದ ನಟ ಕಿಚ್ಚ ಸುದೀಪ್ಗೆ ಸಾಥ್ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರು ಕಾರ್ಯಕ್ರಮವೊಂದರಲ್ಲಿ ‘ಹಿಂದಿ ರಾಷ್ಟ್ರಭಾಷೆ ಅಲ್ಲ’ ಎಂದಿದ್ದರು. ಅದಕ್ಕೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ್ದ ಅಜಯ್ ದೇವಗನ್ ‘ಹಿಂದಿ ರಾಷ್ಟ್ರ ಭಾಷೆ’ ಎಂದು ಪ್ರತಿಪಾದಿಸಿದ್ದರು. ಆ ಬೆನ್ನಲ್ಲೇ, ರಾಷ್ಟ್ರಭಾಷೆ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕನ್ನಡಿಗರಷ್ಟೇ ಅಲ್ಲದೇ, ದಕ್ಷಿಣ ಭಾರತೀಯರು ಅಜಯ್ ದೇವಗನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಸುದೀಪ್ ಪರ ಬ್ಯಾಟ್ ಬೀಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ, ಮೂಲ ನೆಲದ ಸತ್ಯವನ್ನು ಯಾರೊಬ್ಬರೂ ಅಲ್ಲಗಳೆಯಲಾಗದು ಸುದೀಪ್ ಸರ್ ಅವರೇ, ಉತ್ತರದ ನಟ–ನಟಿಯರು, ದಕ್ಷಿಣದ ತಾರೆಯರ ಬಗ್ಗೆ ಭಯ ಮತ್ತು ಅಸೂಯೆ ಹೊಂದಿದ್ದಾರೆ. ಏಕೆಂದರೆ, ಕನ್ನಡದಿಂದ ಡಬ್ ಆದ ‘ಕೆಜಿಎಫ್–2’ ಮೊದಲ ದಿನವೇ ₹ 50 ಕೋಟಿ ಗಳಿಕೆ ಕಂಡಿದೆ. ಮುಂದೆ ಹಿಂದಿ ಸಿನಿಮಾಗಳ ಆರಂಭಿಕ ದಿನಗಳನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
The base undeniable ground truth @KicchaSudeep sir ,is that the north stars are insecure and jealous of the south stars because a Kannada dubbing film #KGF2 had a 50 crore opening day and we all are going to see the coming opening days of Hindi films
— Ram Gopal Varma (@RGVzoomin) April 27, 2022
ಹಿಂದಿ ಭಾಷೆಗೆ ಡಬ್ ಆದ ದಕ್ಷಿಣ ಭಾರತೀಯ ಚಿತ್ರಗಳಾದ ಬಾಹುಬಲಿ, ಆರ್ಆರ್ಆರ್, ಪುಷ್ಪ ಹಾಗೂ ಕೆಜಿಎಫ್ ಚಿತ್ರಗಳು ಭರ್ಜರಿ ಪ್ರದರ್ಶನಗಳನ್ನು ಕಂಡು, ಮೂಲ ಹಿಂದಿ ಭಾಷೆಯ ಚಿತ್ರಗಳನ್ನೇ ಮೀರಿಸಿ ಬಹುಕೋಟಿ ಗಳಿಕೆ ಮಾಡಿಕೊಂಡಿದ್ದವು.
ಅಜಯ್ ದೇವಗನ್ ಹಾಗೂ ಅಮಿತಾಬ್ ಬಚ್ಚನ್ ಅಭಿನಯದ ‘ರನ್ವೇ 34’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ರಾಕುಲ್ ಪ್ರೀತ್ ಸಿಂಗ್ ಅವರೂ ಈ ಚಿತ್ರದಲ್ಲಿ ನಟಿಸಿದ್ದಾರೆ.