ವಿಜಯಪುರ: ಭೂಮಿಯೊಳಗಿನಿಂದ ಕೇಳಿ ಬಂತು ಮತ್ತೆ ಭಾರೀ ಶಬ್ದ

ವಿಜಯಪುರ: ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಮತ್ತೆ ನಿಗೂಢ ಶಬ್ಧ ಕೇಳಿ ಬಂದಿದೆ. ಪರಿಣಾಮ ಭೂಕಂಪನದ ಅನುಭವ ಎಂದುಕೊಂಡ ಜನರು ಭಯದಿಂದ ಇಡೀ ರಾತ್ರಿ ಮನೆಯಿಂದ ಹೊರಗೆ ಓಡಿಬಂದು ನಿದ್ದೆ ಇಲ್ಲದೇ ಜಾಗರಣೆ ಮಾಡಿದ್ದಾರೆ.

ಬಸವನಬಾಗೇವಾಡಿ ತಾಲೂಕಿನ ಕರಿಭಂಟನಾಳ, ಪಿ.ಬಿ‌.ಹುಣಶ್ಯಾಳ ಗ್ರಾಮದಲ್ಲಿ ಬುಧವಾರ ರಾತ್ರಿ ಭೂಕಂಪದ ಮಾದರಿಯಲ್ಲಿ ಭಾರಿ ಸದ್ದು ಕೇಳಿಬಂದಿದೆ. ಮನೆಯಲ್ಲಿ ಪಾತ್ರೆಗಳು, ಇತರೆ ವಸ್ತುಗಳು ಅಲುಗಾಡಿ ಕೆಳಗೆ ಬಿದ್ದಿವೆ. ಇದರಿಂದ ಭಯಗೊಂಡ ಗ್ರಾಮದ ಜನರು ಮನೆಯಿಂದ ಹೊರಗೆ ಓಡಿ ಬಂದು ರಾತ್ರಿ ಪೂರ್ತಿ ನಿದ್ದೆಗೆಟ್ಟು ಜೀವ ಭಯದಲ್ಲೇ ಕಾಲ ಕಳೆದಿದ್ದಾರೆ.

ಕೆಲ ತಿಂಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ, ಮಸೂತಿ, ಮಲಘಾಣ ಸೇರಿ ಹಲವೆಡೆ ಇದೇ ರೀತಿಯಲ್ಲಿ ಭೂಕಂಪನದ ಅನುಭವ ಆಗಿತ್ತು.

ಜಿಲ್ಲೆಯ ಬಸವನಬಾಗೇವಾಡಿ, ವಿಜಯಪುರ, ತಿಕೋಟಾ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಭಾರಿ ಸದ್ದಿನೊಂದಿಗೆ ಭೂಕಂಪನದ ಇಂಥ ಅನುಭವ ಆಗಿದೆ. ಜನರೂ ಭಯದಲ್ಲಿ ಜೀವನ ಕಳೆಯುತ್ತಿದ್ದಾರೆ.

ಆದರೆ ಸರ್ಕಾರ ಈ ಕುರಿತು ನಿಖರ ಅಧ್ಯಯನ ನಡೆಸಿ, ಸಮಸ್ಯೆಗೆ ಶಾಸ್ವತ ಪರಿಹಾರ ಕಂಡುಕೊಂಡಿಲ್ಲ. ಇಂಥ ಘಟನೆಗಳು ನಡೆದಾಗ ಬರುವ ಅಧಿಕಾರಿಗಳು ಪರಿಶೀಲಿಸುತ್ತೇವೆ ಎಂದು ಹೇಳಿ ಹೋದವರು ಮತ್ತೆ ಇತ್ತ ತಿರುಗಿ ನೋಡುವುದಿಲ್ಲ. ಸಮಸ್ಯೆಯ ನೈಜ ಕಾರಣ ಪತ್ತೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎಂದು ಬಾಧಿತ ಹಳ್ಳಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

LEAVE A REPLY

Please enter your comment!
Please enter your name here