ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ನಾಲ್ಕು ಹೊಸ ಕಾಯ್ದೆಗಳು ಜುಲೈ 1ರಿಂದ ಜಾರಿಗೆ ಬರುವ ಅವಕಾಶಗಳಿವೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಈ ಕಾಯ್ದೆಗೆ ಸಂಬಂಧಿಸಿ ನಿಬಂಧನೆಗಳನ್ನು ರೂಪಿಸಿವೆ. ಕಳೆದ ಕೆಲ ತಿಂಗಳಿಂದ ಮುಂದೂಡಿಕೆ ಆಗುತ್ತಾ ಬರುತ್ತಿರುವ ಈ ಕಾಯ್ದೆಗಳ ಜಾರಿಯಿಂದ ಉದ್ಯೋಗಿಗಳ ವೇತನ, ಕೆಲಸದ ಅವಧಿ,ಪಿಎಫ್ ಕಾಂಟ್ರಿಬ್ಯೂಷನ್, ವೀಕ್ಲಿ ಆಫ್ಗಳಲ್ಲಿ ಹಲವು ಮಹತ್ತರ ಬದಲಾವಣೆಗಳು ಆಗಲಿವೆ. ಅವೇನು ಎಂಬುದನ್ನು ಪ್ರತಿಕ್ಷಣ ವಿಶೇಷದಲ್ಲಿ ನೋಡೋಣ.
ವಾರದಲ್ಲಿ ನಾಲ್ಕೇ ದಿನ ಕೆಲಸ
ಹೊಸ ಕಾಯ್ದೆ ಪ್ರಕಾರ, ದಿನದ ಕೆಲಸದ ಅವಧಿ 12 ಗಂಟೆಗಳಿಗೆ ಹೆಚ್ಚಲಿದೆ. ಸದ್ಯ ಇರುವ 8 ಗಂಟೆ ಬದಲು 12 ಗಂಟೆ ಕೆಲಸ ಮಾಡಿ ಎಂದು ಕಂಪನಿ ಕೋರಬಹುದಾಗಿದೆ. ಈ ಲೆಕ್ಕದ ಪ್ರಕಾರ ವಾರದಲ್ಲಿ ಮೂರು ದಿನ ವೀಕ್ಲೀ ಆಫ್ ಸಿಗಲಿದೆ. ಆದರೆ, ವಾರದಲ್ಲಿ ಗರಿಷ್ಠ 48 ಗಂಟೆ ಮಾತ್ರ ಕೆಲಸ ಮಾಡಬೇಕು ಎಂದು ಕಾಯ್ದೆ ಹೇಳುತ್ತದೆ. ಒಂದು ವೇಳೆ ಕಂಪನಿಗಳು 8 ಗಂಟೆ ಮಾತ್ರ ಕೆಲಸ ಮಾಡಿಸಿಕೊಂಡಲ್ಲಿ ವಾರದಲ್ಲಿ ಒಂದು ವೀಕ್ಲೀಆಫ್ ಮಾತ್ರ ಸಿಗಲಿದೆ.
ಕೈಗೆ ಬರುವ ವೇತನ ಕಡಿಮೆ ಆಗಲಿದೆ
ಹೊಸ ಕಾರ್ಮಿಕ ಕಾಯ್ದೆ ಪ್ರಕಾರ, ಒಟ್ಟು ವೇತನದಲ್ಲಿ ಬೇಸಿಕ್ ಸ್ಯಾಲರಿ ಅರ್ಧ ಇರಬೇಕು. ಅಂದರೇ ಅಲೋವೆನ್ಸ್ ಶೇಕಡಾ 50ನ್ನು ಮೀರಬಾರದು. ಈ ಲೆಕ್ಕದಲ್ಲಿ ಬೇಸಿಕ್ ಹೆಚ್ಚಾದಲ್ಲಿ ಪಿಎಫ್ ಕಾಂಟ್ರಿಬ್ಯೂಷನ್ ಮೊತ್ತವೂ ಹೆಚ್ಚಾಗಲಿದೆ. ಇದರಿಂದ ಕೈಗೆ ಬರುವ ವೇತನ ಕಡಿಮೆ ಆಗಲಿದೆ. ಆದರೆ, ಕೆಲಸ ಬಿಡುವ ಸಂದರ್ಭದಲ್ಲಿ ಅಥವಾ ನಿವೃತ್ತಿಯಾದ ಸಂದರ್ಭದಲ್ಲಿ ಸಿಗುವ ಒಟ್ಟು ಹಣ, ಗ್ರಾಚ್ಯೂಟಿ ಮೊತ್ತ ಹೆಚ್ಚು ಸಿಗಲಿದೆ. ಮುಖ್ಯವಾಗಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ವೇತನದಲ್ಲಿ ಹೆಚ್ಚು ಪ್ರಮಾಣ ಅಲೋವೆನ್ಸ್ಗಳೇ ಇರುತ್ತವೆ. ಹೊಸ ಕಾಯ್ದೆ ಜಾರಿಯಾದಲ್ಲಿ ಕೈಗೆ ಬರುವ ವೇತನದ ಮೊತ್ತ ಕಡಿಮೆ ಆಗಲಿದೆ.
ರಜೆಗಳಲ್ಲೂ ಬದಲಾವಣೆ
ಉದ್ಯೋಗಿಗೆ ವರ್ಷದಲ್ಲಿ ಕೊಡುವ ರಜೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಹಾಗೆ, ಹೊಸದಾಗಿ ಕೆಲಸಕ್ಕೆ ಸೇರಿದವರು 180 ದಿನ ದಾಟಿದ ನಂತರ ರಜೆ ಹೊಂದಬಹುದು. ಸದ್ಯ 240 ದಿನ ದಾಟಿದ ನಂತರ ರಜೆಗಳು ಬರುತ್ತವೆ.
ಜುಲೈ 1ರಿಂದ ಈ ಕಾರ್ಮಿಕ ಕಾಯ್ದೆಗಳನ್ನು ಜಾರಿ ಮಾಡಿಯೇ ತೀರಬೇಕೆಂದು ಕೇಂದ್ರ ದೃಢನಿಶ್ಚಯದಿಂದ ಇದೆ. ಆದರೆ, ಈವರೆಗೂ 23 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಈ ಹೊಸ ಕಾರ್ಮಿಕ ಕಾಯ್ದೆಗಳಿಗೆ ಸಂಬಂಧಿಸಿ ನೀತಿ, ನಿಯಮಗಳನ್ನು ರೂಪಿಸಿವೆ. ಈ ಕಾಯ್ದೆಗಳಿಗೆ ಸಂಸತ್ತು ಅನುಮೋದನೆ ನೀಡಿದ್ದರೂ, ಇದು ಸಮವರ್ತಿ ಪಟ್ಟಿಯಲ್ಲಿರುವ ಕಾರಣ ರಾಜ್ಯ ಸರ್ಕಾರಗಳು ಕೂಡ ನೋಟಿಫೈ ಮಾಡಲೇಬೇಕಾಗುತ್ತದೆ.