ಅತ್ಯಾಚಾರ ರಾಜಕೀಯ – ಬದಲಾದ ಸ್ಥಾನದಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್‌ ಗಾಂಧಿ – ವೀಡಿಯೋ ನೋಡಿ

ಹೈದ್ರಾಬಾದ್‌ನಲ್ಲಿ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಹಾಗೂ ಉತ್ತರಪ್ರದೇಶ ರಾಜ್ಯದ ಉನ್ನಾವೋದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಜೀವಂತವಾಗಿ ಸುಟ್ಟುಕೊಂದ ಬಳಿಕ ಅತ್ಯಾಚಾರ ಪ್ರಕರಣ ರಾಜಕೀಯದಲ್ಲೂ ಬಿರುಗಾಳಿಯನ್ನೇ ಎಬ್ಬಿಸಿದೆ.

ವಿಧಾನಸಭಾ ಚುನಾವಣೆ ನಡೆಯುತ್ತಿರುವ ಜಾರ್ಖಂಡ್‌ನಲ್ಲಿ ಚುನಾವಣಾ ಭಾಷಣದಲ್ಲಿ ರಾಹುಲ್‌ ಗಾಂಧಿ ಭಾರತದಲ್ಲಿ ಉತ್ಪಾದಿಸಿ ಆಗುತ್ತಿಲ್ಲ, ಭಾರತದಲ್ಲಿ ಅತ್ಯಾಚಾರ ಮಾಡಿ ಎನ್ನುವ ಪರಿಸ್ಥಿತಿ ಬಂದಿದೆ ಎಂದು ಹೈದರಾಬಾದ್‌ ಮತ್ತು ಉನ್ನಾವೋ ಕೃತ್ಯಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದರು.

ರಾಹುಲ್‌ ಗಾಂಧಿ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಎಂದು ವ್ಯಕ್ತಿಯೊಬ್ಬರು ಕರೆ ನೀಡಿದ್ದಾರೆ. ದೇಶದಲ್ಲಿರುವ ಗಂಡಸರೆಲ್ಲರೂ ಅತ್ಯಾಚಾರಿಗಳೇ..? ರಾಹುಲ್‌ ಗಾಂಧಿಗೆ ೫೦ ವರ್ಷ ವಯಸ್ಸಾಗ್ತಿದೆ. ಇಂತಹ ಹೇಳಿಕೆಗಳಿಂದ ಅತ್ಯಾಚಾರಕ್ಕೆ ಪ್ರಚೋದನೆ ಕೊಟ್ಟಂತೆ ಎನ್ನುವುದು ರಾಹುಲ್‌ ಗಾಂಧಿಗೆ ಗೊತ್ತಾಗಲ್ವಾ..? ರಾಹುಲ್‌ ಗಾಂಧಿ ದೇಶದ ಕ್ಷಮೆ ಕೇಳಬೇಕು ಎಂದು ಸ್ಮೃತಿ ಇರಾನಿ ಆಗ್ರಹಿಸಿದರು.

ಅಷ್ಟೇ ಅಲ್ಲದೇ ಅತ್ಯಾಚಾರವನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳುತ್ತಿರುವ ರಾಹುಲ್‌ ಗಾಂಧಿ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದಾರೆ.

ಆದರೆ ನಾನು ಕ್ಷಮೆ ಕೇಳಲ್ಲ. ದಿನ ಬೆಳಗಾದ್ರೆ ಪತ್ರಿಕೆಗಳನ್ನು ನೋಡಿದ್ರೆ ಮುಖಪುಟದಲ್ಲಿ ಅತ್ಯಾಚಾರದ ಸುದ್ದಿಗಳೇ ಇರುತ್ತವೆ. ವಿಷಯಗಳನ್ನು ಬೇರೆಡೆಗೆ ತಿರುಗಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೀಗೆಲ್ಲ ಮಾಡ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಕಥ್ವಾ ಮತ್ತು ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಕುಲದೀಪ್‌ ಸಿಂಗ್‌ ಸೇಗ‌ರ್‌ ಪ್ರಮುಖ ಆರೋಪಿಯಾಗಿದ್ದಾರೆ.

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ದೆಹಲಿಯನ್ನು ಪ್ರಧಾನಿ ಮೋದಿ ಅತ್ಯಾಚಾರದ ರಾಜಧಾನಿ ಎಂದು ಕರೆದಿದ್ದರು ಮತ್ತು ಅದೇ ಪ್ರಮುಖ ರಾಜಕೀಯ ವಿಷಯವಾಗಿತ್ತು.

ಪ್ರಧಾನಿ ಆಗುವುದಕ್ಕೂ ಮೊದಲು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ನರೇಂದ್ರ ಮೋದಿ ದೆಹಲಿಯನ್ನು ಭಾರತದ ಅತ್ಯಾಚಾರ ರಾಜಧಾನಿ ಎಂದು ಟೀಕಿಸಿದ್ದರು.

ಈಗ ಅದೇ ವೀಡಿಯೋವನ್ನು ಟ್ಯಾಗ್‌ ಮಾಡಿ ಪ್ರಧಾನಿಯವರೇ ನೀವು ದೇಶದ ಕ್ಷಮೆ ಕೇಳಿ ಎಂದು ರಾಹುಲ್‌ ಗಾಂಧಿ ತಿರುಗೇಟು ಕೊಟ್ದಿದ್ದಾರೆ.

ದೆಹಲಿಯಲ್ಲಿ ಘಟಿಸಿದ್ದ ನಿರ್ಭಯ ಅತ್ಯಾಚಾರ ಮತ್ತು ಕಗ್ಗೊಲೆಯನ್ನು ನೀಚ ರಾಜಕೀಯದ ಫಲ ಎಂದು ೨೦೧೪ರ ಚುನಾವಣಾ ಪ್ರಚಾರದಲ್ಲಿ ಮೋದಿ ಹೇಳಿದ್ದರೆ, ಉತ್ತರಪ್ರದೇಶದಲ್ಲಿ ಹೆಚ್ಚಾಗ್ತಿದ್ದ ಅತ್ಯಾಚಾರ ಕೇಸ್‌ಗಳ ಬಗ್ಗೆ ಅಲ್ಲಿನ ವಿಧಾನಸಭಾ ಚುನಾವಣೆಯ ವೇಳೆ ಪ್ರಸ್ತಾಪಿಸಿ ಅಖಿಲೇಶ್‌ ಸಿಂಗ್‌ ಸರ್ಕಾರ, ಬಿಎಸ್‌ಪಿ ವಿರುದ್ಧ ಕಿಡಿಕಾರಿದ್ದರು.

ಆದರೆ ೨೦೧೮ರ ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ನಡೆದ್ದ ಕಾರ್ಯಕ್ರಮದಲ್ಲಿ ಅತ್ಯಾಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದರು.

LEAVE A REPLY

Please enter your comment!
Please enter your name here