ಉಗ್ರರೆಂದು ತಪ್ಪಾಗಿ ಭಾವಿಸಿ ಸೈನಿಕರಿಂದ ಗುಂಡಿನ ದಾಳಿ – 13 ನಾಗರಿಕರ ಹತ್ಯೆ, ಸೇನಾ ತನಿಖೆಗೆ ಆದೇಶ

ಈಶಾನ್ಯ ರಾಜ್ಯ ನಾಗಲ್ಯಾಂಡ್‌ನ ಮಾನ್ ಜಿಲ್ಲೆಯ ಓಟಿಂಗ್‌ನಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ವೇಳೆ ಉಗ್ರಗಾಮಿಗಳೆಂದು ಭಾವಿಸಿ ವಿಶೇಷ ಯೋಧರು ಹಾರಿಸಿ ಮತ್ತು ಆ ಬಳಿಕ ನಡೆದ ಸಂಘರ್ಷವೂ ಸೇರಿ ಘಟನಾವಳಿಯಲ್ಲಿ 13 ಮಂದಿ ನಾಗರಿಕರನ್ನು ಹತ್ಯೆ ಮಾಡಲಾಗಿದೆ.

`ಬಂಡುಕೋರರ ಚಲವಲನ ಬಗ್ಗೆ ಖಚಿತ ಮಾಹಿತಿ ಆಧರಿಸಿ ನ್ಯಾಗಲ್ಯಾಂಡ್‌ನ ಮಾನ್ ಜಿಲ್ಲೆಯ ತಿರುವಿನಲ್ಲಿ ವಿಶೇಷ ಕಾರ್ಯಾಚರಣೆಯನ್ನು ಯೋಜಿಸಲಾಗಿತ್ತು. ಸಾವಿಗೆ ಕಾರಣವಾದ ಬಗ್ಗೆ ಕೋರ್ಟ್ ಮಾರ್ಷಲ್ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳೂ ಗಂಭೀರ ಗಾಯವನ್ನು ಅನುಭವಿಸಿದ್ದು, ಓರ್ವ ಸೈನಿಕ ಬಲಿ ಆಗಿದ್ದಾರೆ. ಈ ಘಟನೆ ಬಗ್ಗೆ ನಾವು ವಿಷಾದಿಸುತ್ತೇವೆ’ ಎಂದು ಸೇನೆ ಹೇಳಿಕೆ ಬಿಡುಗಡೆ ಮಾಡಿದೆ.

ಆಗಿದ್ದೇನು..?

ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ಮೇಜರ್ ದರ್ಜೆಯ ಅಧಿಕಾರಿ ನೇತೃತ್ವದಲ್ಲಿ ಪ್ಯಾರಾ ಕಮಾಂಡೋ ಪಡೆಯಿಂದ ಕಾರ್ಯಾಚರಣೆ ನಿಗದಿ ಆಗಿತ್ತು. ಈ ಕಾರ್ಯಾಚರಣೆ ಬಗ್ಗೆ ಪೊಲೀಸರಿಗಾಗಲೀ ಅಥವಾ ಅಸ್ಸಾಂ ರೈಫಲ್ಸ್ಗಾಗಲೀ ಮಾಹಿತಿ ಇರಲಿಲ್ಲ. ತಿರು ಮತ್ತು ಓಟಿಂಗ್ ರಸ್ತೆಯಲ್ಲಿ ಟ್ರಕ್‌ವೊಂದನ್ನು ಬಂಡುಕೋರರು ಇದ್ದ ವಾಹನವೆಂದು ಗುರುತಿಸಿ ಗುಂಡು ಹಾರಿಸಲಾಯಿತು. ಆ ಟ್ರಕ್‌ನಲ್ಲಿ 8 ಮಂದಿ ಗಣಿ ಕೂಲಿ ಕಾರ್ಮಿಕರಿದ್ದರು. ಗುಂಡಿನ ದಾಳಿಯಲ್ಲಿ ಸ್ಥಳದಲ್ಲೇ ಆರು ಮಂದಿ ಮೃತಪಟ್ಟರೆ ಉಳಿದ ಇಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟರು.

ಸೇನಾಪಡೆಗಳಿಂದ ಗುಂಡಿನ ದಾಳಿಯಲ್ಲಿ ನಾಗರಿಕರು ಮೃತರಾದ ಸುದ್ದಿ ಕೇಳಿ ಗ್ರಾಮಸ್ಥರು ಕಲ್ಲು ಮತ್ತು ಇತರೆ ಆಯುಧಗಳಿಂದ ಯೋಧರನ್ನು ಸುತ್ತುವರೆದು ದಾಳಿ ನಡೆಸಿದರು. ಆಗ ಸೈನಿಕರು ಪ್ರತಿಯಾಗಿ ಗುಂಡು ಹಾರಿಸಿದರು. ಈ ವೇಳೆ ಐವರು ಗ್ರಾಮಸ್ಥರು ಮೃತಪಟ್ಟರೆ, ಹಲವರು ಗಾಯಗೊಂಡರು. ಗ್ರಾಮಸ್ಥರ ದಾಳಿಯಲ್ಲಿ ಓರ್ವ ಕಮಾಂಡೋ ಮೃತಪಟ್ಟಿದ್ದು ಮತ್ತು ಹಲವು ಯೋಧರು ಗಾಯಗೊಂಡರು.

ಉದ್ರಿಕ್ತ ಗ್ರಾಮಸ್ಥರು ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದರು.

ಈ ಕಳವಳಕಾರಿ ಬೆಳವಣಿಗೆ ಬೆನ್ನಲ್ಲೇ ದೆಹಲಿಯಿಂದ ಸಿಎಂ ನೈಪಿಯೋ ರಿಯೋ ನಾಗಲ್ಯಾಂಡ್‌ಗೆ ವಾಪಸ್ ಆಗಿದ್ದು, ಕೃತ್ಯದ ಬಗ್ಗೆ ಉನ್ನತ ಪಟ್ಟದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here