ಆರೋ, ಹತ್ತೋ..? – ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​​ವೇನಲ್ಲಿ ಮಾರ್ಗಗಳೆಷ್ಟು..?

ಬೆಂಗಳೂರು-ಮೈಸೂರು ನಡುವಿನ ಎಕ್ಸ್​ಪ್ರೆಸ್​ ಹೈವೇ ದಶಪಥ ಅಂದರೆ 10 ಮಾರ್ಗಗಳ ಎಕ್ಸ್​ಪ್ರೆಸ್​ ಹೆದ್ದಾರಿಯೂ ಅಥವಾ 6 ಮಾರ್ಗಗಳ ಎಕ್ಸ್​ಪ್ರೆಸ್​ ಹೆದ್ದಾರಿಯೋ..?
ಫೆಬ್ರವರಿ 10ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂಗ್ಲೀಷ್​ನಲ್ಲಿ ಟ್ವೀಟೊಂದನ್ನು ಮಾಡಿದ್ದರು.
ಎಂಥ ದೃಶ್ಯ! 10 ಪಥಗಳ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇ ಜೊತೆಗೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು, ವಿಶ್ವ ಮಟ್ಟದ ಮೂಲಭೂತ ಸೌಕರ್ಯ ಮತ್ತು ಕರ್ನಾಟಕದ ಹಿಂದೆಂದೂ ಇರದ ಬೆಳವಣಿಗೆಯ ದೃಶ್ಯ ರೂಪಕ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಡಬಲ್​ ಇಂಜಿನ್​ ರಾಜ್ಯದಲ್ಲಿ ಬೆರಗುಗಳನ್ನು ಸೃಷ್ಟಿಸುತ್ತಿದೆ
ಎಂದು ಬರೆದುಕೊಂಡಿದ್ದರು.

 

ಆ ವೀಡಿಯೋದಲ್ಲಿ ಎಕ್ಸ್​ಪ್ರೆಸ್​ ವೇ ಕೆಳಕ್ಕೆ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಓಡುವ ದೃಶ್ಯ ಇತ್ತು.

ಮುಖ್ಯಮಂತ್ರಿಗಳ ಈ ಟ್ವೀಟ್​ಗೆ ಪ್ರಧಾನಿ ಮೋದಿಯವರು ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿದ್ದರು.
ಹತ್ತೋ ಅಥವಾ ಆರೋ..?
ಆದರೆ ವೀಡಿಯೋದಲ್ಲಿದ್ದ ಮಾರ್ಗಗಳ ಸಂಖ್ಯೆ ಆರು. ಎಡಭಾಗದಲ್ಲಿ ಮೂರು, ಬಲಭಾಗದಲ್ಲಿ ಮೂರು.
ಹಾಗಾದ್ರೆ 10 ಮಾರ್ಗಗಳ ರಸ್ತೆಯಲ್ಲಿ ಉಳಿದ ನಾಲ್ಕು ಮಾರ್ಗಗಳು ಎಲ್ಲಿ ಹೋದವು ಎನ್ನುವ ಕುತೂಹಲ ಉಂಟಾಯಿತು.
ಶೇಕಡಾ 40 ಕಮಿಷನ್​ ಪಾಲು ಎಂಬ ವ್ಯಂಗ್ಯ
ಈ ಕುತೂಹಲದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದಿರುವ ಶೇಕಡಾ 40 ಕಮಿಷನ್​ ಆರೋಪವೂ ಅಂಟಿಕೊಳ್ತು.
10 ಮಾರ್ಗಗಳಲ್ಲಿ 4 ಮಾರ್ಗ ಕಮಿಷನ್​ ರೂಪದಲ್ಲಿ ಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕುಚ್ಯೋದ್ಯ ಮಾಡಲಾಯಿತು.
ಈ ಕುಚ್ಯೋದ್ಯಗಳ ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಎಕ್ಸ್​ಪ್ರೆಸ್​ ವೇನಲ್ಲಿ ಇರುವುದು 10 ಮಾರ್ಗಗಳೇ ಎಂದು ಸಮರ್ಥನೆ ಕೊಡುವ ಪ್ರಯತ್ನ ಮಾಡಿದರು.
ಈ ಸಮರ್ಥನೆಯ ಭಾಗವಾಗಿ ಸರ್ವಿಸ್​ ರಸ್ತೆಗಳನ್ನೂ ಹೆದ್ದಾರಿಯ ಮುಖ್ಯ ರಸ್ತೆಯ ಭಾಗವಾಗಿ ಸೇರಿಸಿ ಲೆಕ್ಕ ಹಾಕಿದರು. ಸರ್ವಿಸ್​ ರಸ್ತೆ ಸೇರಿಸಿದರೆ 10 ಮಾರ್ಗಗಳು ಆಗ್ತವೆ ಎಂದು ವಾದಿಸಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್​ ಸಂತೋಷ್​ ಅವರೂ ಸರ್ವಿಸ್​ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯ ಭಾಗ ಎಂದು ವಾದಿಸಿ ಇದು 10 ಮಾರ್ಗಗಳ ಕಾಮಗಾರಿ ಎಂದು ವಾದಿಸಿದರು.

ನಿಜಾಂಶ ಏನು..?:
ನವೆಂಬರ್​ 21, 2019ರಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಲೋಕಸಭೆಯಲ್ಲಿ ಕೊಟ್ಟ ಲಿಖಿತ ಉತ್ತರದ ಪ್ರಕಾರ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ಇದು 6 ಮಾರ್ಗಗಳ ರಾಷ್ಟ್ರೀಯ ಹೆದ್ದಾರಿ.
ಬೆಂಗಳೂರು-ನಿಡಘಟ್ಟ ನಡುವಿನ 6 ಮಾರ್ಗಗಳ ಕಾಮಗಾರಿಗೆ ಫೆಬ್ರವರಿ, 2018ರಲ್ಲಿ ಎರಡು ಪ್ಯಾಕೇಜ್​ಗಳಲ್ಲಿ ಗುತ್ತಿಗೆ ನೀಡಲಾಗಿದೆ. ಈ ಭಾಗದಲ್ಲಿ ಶೇಕಡಾ 18ರಷ್ಟು ಕಾಮಗಾರಿ ಮುಗಿದಿದೆ. ಮೈಸೂರು-ನಿಡಘಟ್ಟ ನಡುವೆ 6 ಮಾರ್ಗಗಳ ಕಾಮಗಾರಿ ಆರಂಭಕ್ಕೆ ದಿನಾಂಕ ಘೋಷಣೆ ಆಗಿಲ್ಲ, ಶೇಕಡಾ 85ರಷ್ಟು ಭೂಸ್ರ್ವಾಧೀನ ಪ್ರಕ್ರಿಯೆ ಮುಗಿದಿದೆ.
ಬೆಂಗಳೂರು-ನಿಡಘಟ್ಟ-ಮೈಸೂರು ನಡುವಿನ ಕಾಮಗಾರಿಯ ಒಟ್ಟು ವೆಚ್ಚ 7,400 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಈಗಾಗಲೇ 2,270 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಈ 6 ಮಾರ್ಗಗಳ ಕಾಮಗಾರಿ ಕಾಮಗಾರಿ ಆರಂಭದ 30 ತಿಂಗಳಲ್ಲಿ ಮುಗಿಯಲಿದೆ 
ಎಂದು ಲೋಕಸಭೆಗೆ ಉತ್ತರಿಸಿದ್ದರು.

ಲೋಕಸಭೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಕೊಟ್ಟ ಉತ್ತರ

ಮಾರ್ಚ್​​ 28, 2022:
ಆದರೆ ಮಾರ್ಚ್​​ 28, 2022ರಂದು ಸಚಿವ ನಿತಿನ್​ ಗಡ್ಕರಿಯವರು ಇದು 10 ಮಾರ್ಗಗಳ ಕಾಮಗಾರಿ ಎಂದು ಟ್ವೀಟಿಸಿದ್ದರು.

ಜೂನ್​ 19,2022:
ಆದರೆ ಇದಾದ ಜೂನ್​ 19,2022ರಂದು ಸಚಿವ ನಿತಿನ್​ ಗಡ್ಕರಿಯವರು ಎಕ್ಸ್​ಪ್ರೆಸ್​ ವೇ ಕಾಮಗಾರಿಯಲ್ಲಿ ಆಗಿರುವ ಪ್ರಗತಿ ಬಗ್ಗೆಯೂ ಮಾಹಿತಿಗಳ ಸಮೇತ ಎಕ್ಸ್​ಪ್ರೆಸ್​ ವೇಯ ಚಿತ್ರವನ್ನೂ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. 
ಆ ಚಿತ್ರದಲ್ಲಿಯೂ 6 ಮಾರ್ಗಗಳೇ ಇತ್ತು. ಸಿಎಂ ಬೊಮ್ಮಾಯಿ ಟ್ವೀಟಿಸಿದ ವೀಡಿಯೋದಲ್ಲಿರುವುದು 6 ಮಾರ್ಗವೇ.
 

6 ಮಾರ್ಗಗಳ ಕಾಮಗಾರಿಗೆ ಟೆಂಡರ್​ ಆಹ್ವಾನ:
ಜೊತೆಗೆ ಕಾಮಗಾರಿಗೆ ಕರೆಯಲಾದ ಟೆಂಡರ್​ನಲ್ಲೂ ಇದು 6 ಮಾರ್ಗಗಳ ಕಾಮಗಾರಿ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ ಹೇಳಿತ್ತು.

LEAVE A REPLY

Please enter your comment!
Please enter your name here