ಮುಸ್ಲಿಂ ಯುವತಿಯರು ತಮ್ಮ 16 ನೇ ವಯಸ್ಸಿಗೆ ತಮ್ಮ ಇಚ್ಚೆಯಂತೆ ಮದುವೆಯಾಗಬಹುದು ಎಂದು ಪಂಜಾಬ್ ಮತ್ತು ಚಂಡೀಗಡ ನ್ಯಾಯಾಲಯದ ಏಕವ್ಯಕ್ತಿ ಪೀಠ ತೀರ್ಪು ನೀಡಿದೆ.
ಪಾಟ್ನಾಕೋಟ್ ಮೂಲದ 16 ವರ್ಷದ ಮುಸ್ಲಿಂ ಯುವತ ಹಾಗೂ 21 ವರ್ಷದ ಮುಸ್ಲಿಂ ಯುವಕ ಪ್ರೀತಿಸಿ ಮದುವೆಯಾಗಿದ್ದು, ತಮ್ಮ ಕುಟುಂಬದಿಂದ ರಕ್ಷಣೆ ನೀಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಸೋಮವಾರ ಈ ಅರ್ಜಿಯ ವಿಚಾರಣೆ ನಡೆಸಿದ ಪಂಜಾಬ್ ಹಾಗೂ ಚಂಡೀಗಡ ನ್ಯಾಯಾಲಯದ ಏಕ ನ್ಯಾಯಮೂರ್ತಿ ಪೀಠದ ನ್ಯಾಯಮೂರ್ತಿ ಜಸ್ಚಿತ್ ಸಿಂಗ್ ಬೇಡಿಯವರು ಈ ತೀರ್ಪು ನೀಡಿದ್ದು, ಈ ದಂಪತಿಗಳಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ಈ ದಂಪತಿಗಳು ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದಾರೆ. ಈ ದಂಪತಿಗಳನ್ನು ಸಂವಿದಾನದ ಅಡಿಯಲ್ಲಿನ ಮೂಲಭೂತ ಹಕ್ಕುಗಳಿಂದ ವಂಚಿತಗೊಳಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಇಸ್ಲಾಮಿಕ್ ಷರಿಯಾ ಕಾನೂನನ್ನು ಉಲ್ಲೇಖಿಸಿದ್ ನ್ಯಾಯಮೂರ್ತಿ ಬೇಡಿಯವರು, ಮುಸ್ಲಿಂ ಯುವತಿಯ ವಿವಾಹವನ್ನು ಮುಸ್ಲಿಂ ವೈಯಕ್ತಿಕ ಕಾನೂನಿನಿಂದ ನಿಯಂತ್ರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ದಿನೇಶ್ ಫರ್ದುಂಜಾ ಮುಲ್ಲಾ ಅವರು ಬರೆದಿರುವ ಪ್ರಿನ್ಸಿಪಲ್ ಆಫ್ ಮೊಹಮ್ಮದೀಯನ್ ಲಾ (Principles of Mohammedan Law) ಪುಸ್ತಕದ 195 ನೇ ಅನುಚ್ಚೇದದ ಪ್ರಕಾರ, 2ನೇ ಅರ್ಜಿದಾರರಾಗಿರುವ ಯುವತಿ 16 ವರ್ಷದ ನಂತರ ತನ್ನ ಇಚ್ಚೆಗೆ ಅನುಸಾರವಾಗಿ ಮದುವೆಯಾಗುವ ಹಕ್ಕು ಹೊಂದಿದ್ದಾಳೆ. ಹಾಗೆಯೇ, ಮೊದಲನೇ ಅರ್ಜಿದಾರರಾದ ಯುವಕ 21 ವರ್ಷಕ್ಕಿಂತ ಹೆಚ್ಚಿನ ವಯಸ್ಸು ಹೊಂದಿದ್ದಾರೆ. ಆ ಮೂಲಕ ಈ ಇಬ್ಬರು ಮುಸ್ಲಿಂ ಕಾನೂನಿನ ಪ್ರಕಾರ ಮದುವೆಗೆ ಅರ್ಹರು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರು ಸಲ್ಲಿಸಿದ ಅರ್ಜಿ ಪುರಸ್ಕರಿಸಿರುವ ನ್ಯಾಯಾಲಯ, ಈ ದಂಪತಿಗೆ ಭದ್ರತೆ ನೀಡಬೇಕು ಹಾಗೂ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಪಾಟ್ನಾಕೋಟ್ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದೆ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ, ನಮ್ಮ ಮದುವೆ ಇದೇ ಜೂನ್ 8 ರಂದು ಮುಸ್ಲಿಂ ವಿಧಿಗಳ ಪ್ರಕಾರ ನಡೆದಿದೆ. ಆದರೆ, ಯುವತಿಯ ಪೋಷಕರು ಸಮ್ಮತಿ ಇಲ್ಲದೆ ಮದುವೆ ಆಗಿರುವುದಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಆದ್ದರಿಂದ, ಮುಸ್ಲಿಂ ಕಾನೂನಿನ ಪ್ರಕಾರ ನಮಗೆ ರಕ್ಷಣೆ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು.