ADVERTISEMENT
ADVERTISEMENT
ಮುಸಲ್ಮಾನ ಮೀಸಲಾತಿ ರದ್ದತಿಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸು ಮಾಡಿರಲಿಲ್ಲ ಮತ್ತು ರದ್ದತಿಗೂ ಮೊದಲು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಆಯೋಗದ ಸಲಹೆ ಹಾಗೂ ಅಭಿಪ್ರಾಯ ಕೇಳಿರಲಿಲ್ಲ ಎಂದು ಅಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಪ್ರಮುಖ ದಿನಪತ್ರಿಕೆ ಪ್ರಜಾವಾಣಿಗೆ ನೀಡಿರುವ ಸಂದರ್ಶನದಲ್ಲಿ ಹೆಗ್ಡೆ ಅವರು ಮುಸಲ್ಮಾನ ಮೀಸಲಾತಿ ರದ್ದತಿ ಬಗ್ಗೆ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಮುಸ್ಲಿಂ ಮೀಸಲಾತಿ ರದ್ದುಪಡಿಸುವ ಮೊದಲು ಈ ಹಿಂದಿನ ರಾಜ್ಯ ಸರ್ಕಾರ ಆಯೋಗದ ಅಭಿಪ್ರಾಯ ಕೇಳಿಲ್ಲ. ಮೀಸಲಾತಿ ರದ್ದುಪಡಿಸಲು ನಾವು ಹೇಳಿಯೂ ಇಲ್ಲ. ಈ ಬಗ್ಗೆ ಸರ್ಕಾರ ನಮ್ಮಿಂದ ಯಾವುದೇ ಸಲಹೆಯನ್ನೂ ಪಡೆದಿಲ್ಲ. ಅದು ಸರ್ಕಾರದ್ದೇ ತೀರ್ಮಾನ
ಎಂದು ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದಾರೆ.
ಈ ಮೂಲಕ ಮಧ್ಯಂತರ ವರದಿ ಆಧರಿಸಿ ಮೀಸಲಾತಿ ರದ್ದು ಮಾಡಿರುವುದಾಗಿ ವಾದಿಸಿದ್ದ ಬಿಜೆಪಿ ಸರ್ಕಾರದ ತೀರ್ಮಾನಕ್ಕೆ ಸುಪ್ರೀಂಕೋರ್ಟ್ನಲ್ಲಿ ಭಾರೀ ಹಿನ್ನಡೆಯಾಗುವ ನಿರೀಕ್ಷೆ ಇದೆ.
ಪ್ರವರ್ಗ ಬಿ ಅಡಿಯಲ್ಲಿ ಶೇಕಡಾ 4ರಷ್ಟು ಮೀಸಲಾತಿ ಹಂಚಿಕೆಯಾಗಿದ್ದು, ಈ ಕೆಟಗರಿಯಲ್ಲಿ ಮುಸಲ್ಮಾನರಿಗೂ ಮೀಸಲಾತಿ ಹಂಚಿಕೆಯಾಗಿತ್ತು.
ಆದರೆ ಪಂಚಮಸಾಲಿ ಲಿಂಗಾಯತರು ಮತ್ತು ಒಕ್ಕಲಿಗರು ಮೀಸಲಾತಿ ಹೆಚ್ಚಳಕ್ಕೆ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಈ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ ಆ ಮೀಸಲಾತಿಯಲ್ಲಿ ಶೇಕಡಾ 2ರಷ್ಟನ್ನು ಪಂಚಮಸಾಲಿ ಲಿಂಗಾಯತರಿಗೂ ಉಳಿದೆರಡಷ್ಟು ಮೀಸಲಾತಿಯನ್ನು ಒಕ್ಕಲಿಗರಿಗೂ ಹಂಚಿಕೆ ಮಾಡಲಾಗಿತ್ತು.
ರಾಜ್ಯ ಬಿಜೆಪಿ ಸರ್ಕಾರದ ಕ್ರಮ ಪ್ರಶ್ನಿಸಿ ಮುಸಲ್ಮಾನರು ಸುಪ್ರೀಂಕೋರ್ಟ್ನಲ್ಲಿ ದಾವೆ ಸಲ್ಲಿಸಿದರು.
ಹಿಂದುಳಿದ ವರ್ಗಗಳ ಮಧ್ಯಂತರ ವರದಿಯನ್ನು ಆಧರಿಸಿ ಮೀಸಲಾತಿ ರದ್ದುಪಡಿಸುವ ಅಗತ್ಯ ಏನಿತ್ತು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದ ಬಳಿಕ ಆಗಿನ ಬಿಜೆಪಿ ಸರ್ಕಾರ ಮೀಸಲಾತಿ ರದ್ದತಿ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿತ್ತು.
ಇದೇ ತಿಂಗಳ 24ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆಯಲಿದ್ದು, ಪ್ರತಿವಾದಿಯಾಗಿರುವ ಕರ್ನಾಟಕ ಹಿಂದುಳಿದ ಆಯೋಗ ತನ್ನ ವಾದವನ್ನು ಲಿಖಿತವಾಗಿ ಸಲ್ಲಿಸಬೇಕಾಗುತ್ತದೆ.
ಮಧ್ಯಂತರ ವರದಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಪ್ರಸ್ತಾಪ ಇಲ್ಲ. ಅದರಲ್ಲಿ ಮುಸ್ಲಿಂ ಮೀಸಲಾತಿ ರದ್ದು ವಿಷಯವೂ ಇರಲಿಲ್ಲ. ರಾಜ್ಯದಲ್ಲಿರುವ ಮುಸಲ್ಮಾನರ ಸ್ಥಿತಿಗತಿ ಬಗ್ಗೆಯೂ ಆಯೋಗ ಸಮೀಕ್ಷೆ ನಡೆಸಿಲ್ಲ