ಅಕ್ಷಯ್ ಕುಮಾರ್ ಯು – ಮುಖ್ಯ ಸಂಪಾದಕರು, ಪ್ರತಿಕ್ಷಣ ನ್ಯೂಸ್
ಕಾರ್ಕಳ ವಿಧಾನಸಭಾ ಕ್ಷೇತ್ರ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು. ಈ ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಯಾರಿಗೆ ಟಿಕೆಟ್..? ಯಾರಾಗಲಿದ್ದಾರೆ ಕಾಂಗ್ರೆಸ್ ಅಭ್ಯರ್ಥಿ..?
ಕಾರ್ಕಳದಲ್ಲಿ ಈ ಬಾರಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅವರ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರ ಕುತೂಹಲಕಾರಿ.
ಆದರೆ ಕಾಂಗ್ರೆಸ್ನಿಂದ ಯಾರು ಅಭ್ಯರ್ಥಿ ಆಗ್ತಾರೆ ಎನ್ನುವುದು ಕಾರ್ಕಳ ಕ್ಷೇತ್ರದ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ನಿರ್ಧರಿಸಲಿದೆ.
ಕಾಂಗ್ರೆಸ್ನಲ್ಲಿ ಟಿಕೆಟ್ ಆಕಾಂಕ್ಷಿಗಳು:
ಕಾರ್ಕಳ ಕಾಂಗ್ರೆಸ್ನಲ್ಲಿ ಐವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ.
1. ಸುಧಾಕರ್ ಶೆಟ್ಟಿ – ತಾಲೂಕು ಪಂಚಾಯತ್ ಮಾಜಿ ಸದಸ್ಯರು, ಕೆಎಂಎಫ್ ಆಡಳಿತ ಮಂಡಳಿ ನಿರ್ದೇಶಕರು ಮತ್ತು ಉದ್ಯಮಿ
2. ಡಿ ಆರ್ ರಾಜು – ಗುತ್ತಿಗೆದಾರರು ಮತ್ತು ಉದ್ಯಮಿ
3. ಮಂಜುನಾಥ ಪೂಜಾರಿ – ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು
4. ನೀರೆ ಕೃಷ್ಣ ಶೆಟ್ಟಿ – ಕಾರ್ಕಳ ಕಾಂಗ್ರೆಸ್ ಮುಖಂಡರು
5. ಸುರೇಂದ್ರ ಶೆಟ್ಟಿ – ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ಮತ್ತು ಉದ್ಯಮಿ
ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ಗೆ ಬರ್ತಾರಾ..?
ಆದರೆ ಸುಧಾಕರ್ ಶೆಟ್ಟಿ ಅವರನ್ನು ಹೊರತುಪಡಿಸಿ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದವರು ನಾಲ್ವರು. ಆದರೆ ಅರ್ಜಿ ಸಲ್ಲಿಸಿದವರ ಪೈಕಿ ಯಾರಿಗೆ ಟಿಕೆಟ್ ಕೊಟ್ಟರೂ ಈ ಆಕಾಂಕ್ಷಿಗಳ ವರ್ಚಸ್ಸಿನಲ್ಲಿ ಕಾರ್ಕಳದ ಸದ್ಯದ ರಾಜಕೀಯ ವಾತಾವರಣದಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎನ್ನುವುದು ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ.
ಸತತವಾಗಿ ಎರಡು ಬಾರಿ ಕಾರ್ಕಳದಲ್ಲಿ ಸೋಲು ಕಂಡಿರುವ ಕಾಂಗ್ರೆಸ್ಗೆ ಈ ಬಾರಿ ಗೆಲ್ಲುವುದು ರಾಜಕೀಯ ಅಸ್ತಿತ್ವದ ಹಿನ್ನೆಲೆಯಲ್ಲಿ ಅತ್ಯಂತ ಅನಿವಾರ್ಯ.
ಈ ಹಿನ್ನೆಲೆಯಲ್ಲಿ ಸುನಿಲ್ ಕುಮಾರ್ ಅವರಿಗೆ ಪ್ರಬಲ ಸ್ಪರ್ಧಿಯಾಗಿ ಕರ್ನಾಟಕ ರಾಜ್ಯ ಹಿಂದುಳಿದ ಆಯೋಗಗಳ ಅಧ್ಯಕ್ಷರೂ, ಮಾಜಿ ಸಚಿವರೂ, ಮಾಜಿ ಸಂಸದರೂ ಆಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ಗೆ ಮತ್ತೆ ಕರೆದುಕೊಂಡು ಅವರನ್ನು ಕಾರ್ಕಳದಲ್ಲಿ ಕಣಕ್ಕಿಳಿಸುವ ಬಗ್ಗೆ ಕಾರ್ಕಳ ಕಾಂಗ್ರೆಸ್ ನಾಯಕರು ಪ್ರಯತ್ನ ಮಾಡಿದ್ದರು.
ಕಾಂಗ್ರೆಸ್ ತೊರೆದಿದ್ದ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್ಗೆ ಬಂದು ಕಾರ್ಕಳದಲ್ಲಿ ಸ್ಪರ್ಧಿಸಿದರೆ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎನ್ನುವ ಅಭಿಪ್ರಾಯ ಕಾರ್ಕಳ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರದ್ದು.
ಈ ಸಂಬಂಧ ಕಾರ್ಕಳ ಕಾಂಗ್ರೆಸ್ ನಿಯೋಗ ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ವಿಧಾನಪರಿಷತ್ನಲ್ಲಿ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್ ಅವರ ಮುಂದೆ ಜಯಪ್ರಕಾಶ್ ಹೆಗ್ಡೆ ಅವರನ್ನು ಮತ್ತೆ ಕಾಂಗ್ರೆಸ್ಗೆ ಕರೆತರುವ ಪ್ರಸ್ತಾಪ ಮುಂದಿಟ್ಟಿತ್ತು.
ಉಡುಪಿಯಲ್ಲಿ ನಡೆದಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ವೇಳೆಯೂ ಕಾರ್ಕಳ ಕಾಂಗ್ರೆಸ್ ನಾಯಕರೂ ಪಕ್ಷದ ರಾಜ್ಯ ನಾಯಕರಿಗೆ ಹೆಗ್ಡೆ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.
ಇದಲ್ಲದೇ ಕಾರ್ಕಳ ಕಾಂಗ್ರೆಸ್ ನಾಯಕರು ಹೆಗ್ಡೆ ಅವರನ್ನು ಭೇಟಿಯಾಗಿ ಮತ್ತೆ ಕಾಂಗ್ರೆಸ್ಗೆ ಬರುವಂತೆ ಮನವೊಲಿಕೆ ಪ್ರಯತ್ನವನ್ನೂ ಮಾಡಿದ್ದರು. ಹೆಗ್ಡೆ ಅವರ ರಾಜಕೀಯ ಎದುರಾಳಿ ವಿಧಾನಪರಿಷತ್ ಮಾಜಿ ಸಭಾಪತಿ ಪ್ರತಾಪ್ಚಂದ್ರ ಶೆಟ್ಟಿ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರಿಂದ ಹೆಗ್ಡೆ ಅವರು ಕಾಂಗ್ರೆಸ್ಗೆ ಬಂದೇ ಬರುತ್ತಾರೆ ಎಂಬ ನಿರೀಕ್ಷೆ ಕಾರ್ಕಳ ಕಾಂಗ್ರೆಸ್ಸಿಗರಲ್ಲಿತ್ತು.
ಆದರೆ ಮೂಲಗಳ ಮಾಹಿತಿ ಪ್ರಕಾರ ಕೊನೆ ಘಳಿಗೆಯಲ್ಲಿ ಜಯಪ್ರಕಾಶ್ ಹೆಗ್ಡೆ ಅವರನ್ನು ಕಾಂಗ್ರೆಸ್ಗೆ ಕರೆತರುವ ಪ್ರಯತ್ನ ಕೈಗೊಡಿಲ್ಲ.
ಮುನಿಯಾಲು ಉದಯ್ಕುಮಾರ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್..?
ಈ ಎಲ್ಲ ಕಾರಣಗಳಿಂದ ಈ ಬಾರಿ ಮುನಿಯಾಲು ಉದಯ್ಕುಮಾರ್ ಶೆಟ್ಟಿ ಅವರಿಗೆ ಕಾರ್ಕಳದಿಂದ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎನ್ನಲಾಗಿದೆ.
2018ರ ಚುನಾವಣೆಯಲ್ಲಿ ವೈಯಕ್ತಿಕ ವರ್ಚಸ್ಸಿನ ಉದ್ಯಮಿ ಆಗಿರುವ ಉದಯ್ ಕುಮಾರ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿದೆ ಎನ್ನುವ ವಾತಾವರಣ ಇದ್ಯಾಗಿಯೂ ಕೂಡಾ ಕಾಂಗ್ರೆಸ್ ಆಂತರಿಕ ಸಂಘರ್ಷದ ಕಾರಣ ಕೊನೆಗೆ ಗೋಪಾಲ ಭಂಡಾರಿಗೆ ಅವರಿಗೆ ಟಿಕೆಟ್ ಘೋಷಿಸಲಾಗಿತ್ತು.
ಆ ಬಳಿಕ ನಡೆದ ಬೆಳವಣಿಗೆಯ ಹಿನ್ನೆಲೆಯಲ್ಲಿ ಉದಯ್ ಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದರು ಮತ್ತು ಅವರ ಬೆಂಬಲಿಗರೂ ತಟಸ್ಥರಾದರು.
ಆದರೆ ಈ ಬಾರಿ ಉದಯ್ ಕುಮಾರ್ ಮತ್ತೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಕಾಂಗ್ರೆಸ್ ಮಣೆ ಹಾಕುವ ನಿರೀಕ್ಷೆ ಇದೆ ಎಂದು ಮೂಲಗಳು ಪ್ರತಿಕ್ಷಣನ್ಯೂಸ್ಗೆ ತಿಳಿಸಿವೆ.
ಕಾರ್ಕಳದಲ್ಲಿ ಕಾಂಗ್ರೆಸ್ ಗೆಲ್ಲಬೇಕಾದ್ರೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೊಡುವುದು ಅನಿವಾರ್ಯ ಮತ್ತು ಒಂದು ವೇಳೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಗೆಲುವು ನಿರೀಕ್ಷಿಸಬಹುದು ಎನ್ನುವುದು ಕಾಂಗ್ರೆಸ್ಸಿಗರ ಮಾತು.
ಸ್ಪರ್ಧೆಗೆ ಉತ್ಸುಕ:
ಸದ್ಯಕ್ಕೆ ಕಾರ್ಕಳದಲ್ಲಿ ಸಚಿವ ವಿ ಸುನಿಲ್ ಕುಮಾರ್ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಇರುವ ಕಾರಣ ಮತ್ತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸ್ಪರ್ಧೆಯ ಕಾರಣ ಈ ಬಾರಿ ಕಾಂಗ್ರೆಸ್ಗೆ ಮೇಲುಗೈ ಆಗುವ ವಾತಾವರಣ ಇದೆ ಎಂಬ ಅಭಿಪ್ರಾಯ ಕಾಂಗ್ರೆಸ್ಸಿಗರದ್ದು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ಮುನಿಯಾಲು ಉದಯ್ಕುಮಾರ್ ಶೆಟ್ಟಿ ಅವರು ಮನಸ್ಸು ಮಾಡಿದ್ದಾರೆ ಎಂದು ಮೂಲಗಳು ಪ್ರತಿಕ್ಷಣ ನ್ಯೂಸ್ಗೆ ತಿಳಿಸಿವೆ.
ಮೊಯ್ಲಿ ನಿರ್ಧಾರ ಏನು..?
ಕಳೆದ ಬಾರಿ ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೈ ತಪ್ಪಿದ್ದರ ಹಿಂದೆ ಮತ್ತು ಆ ಮೂಲಕ ಕಾರ್ಕಳದಲ್ಲಿ ಕಾಂಗ್ರೆಸ್ ಸೋಲಿಗೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕಾರಣರಾದರು ಎಂಬ ಸಿಟ್ಟು ಕಾರ್ಕಳ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಲ್ಲಿದೆ.
ಸಚಿವ ಸುನಿಲ್ ಕುಮಾರ್ ಅವರ ಜೊತೆಗೆ ವೀರಪ್ಪಮೊಯ್ಲಿ ಅವರು ಚೆನ್ನಾಗಿದ್ದಾರೆ. ಕಾರ್ಕಳದಲ್ಲಿ ಯಾರಿಗೆ ಕೊಡಬೇಕು ಎನ್ನುವುದರ ಪಕ್ಷದ ತೀರ್ಮಾನದ ಹಿಂದೆ ಮೊಯ್ಲಿ ಅವರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದು ಮುಖ್ಯವಾಗುತ್ತದೆ.
ಕಳೆದ ಬಾರಿ ಎಸಗಲಾದ ಪ್ರಮಾದವನ್ನು ಈ ಬಾರಿ ಮತ್ತೆ ಎಸಗಿದರೆ, ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸುನಿಲ್ ಕುಮಾರ್ ಗೆಲುವಿಗೆ ಕಾರಣವಾದರೆ ಮತ್ತೆ ಕಾರ್ಕಳದಲ್ಲಿ ಪಕ್ಷವನ್ನು ಉಳಿಸಿಕೊಳ್ಳುವುದು ಅಸಾಧ್ಯವಾಗಬಹುದು ಎನ್ನುವುದು ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತತರ ಎಚ್ಚರಿಕೆಯ ಮಾತುಗಳು.
ಹೀಗಾಗಿ ವೀರಪ್ಪ ಮೊಯ್ಲಿ ಅವರ ನಿರ್ಧಾರ ಏನು ಎನ್ನುವುದು ಕಾರ್ಕಳ ಕಾಂಗ್ರೆಸ್ ಭವಿಷ್ಯದ ಹಿನ್ನೆಲೆಯಲ್ಲಿ ಮಹತ್ವ ಪಡೆದಿದೆ.
ಮುತ್ಸದಿತನ ತೋರುತ್ತಾರಾ ಮೊಯ್ಲಿ..?
ಕಾರ್ಕಳ ಕಾಂಗ್ರೆಸ್ನ ಹಿತಾಸಕ್ತಿ ಮತ್ತು ಭವಿಷ್ಯದ ದೃಷ್ಟಿಯಲ್ಲಿ ಮೊಯ್ಲಿ ಅವರು ತಮ್ಮ ವೈಯಕ್ತಿಕ ವೈಮನಸ್ಸನ್ನು ದೂರವಿಟ್ಟು, ಕಾರ್ಕಳ ಕ್ಷೇತ್ರದ ಇತರೆ ಟಿಕೆಟ್ ಆಕಾಂಕ್ಷಿಗಳು ಮತ್ತು ಎಲ್ಲ ಮುಖಂಡರನ್ನು ಒಗ್ಗೂಡಿಸಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ಕೊಡಿಸಿ ಮೊಯ್ಲಿ ತಮ್ಮ ರಾಜಕೀಯ ಮುತ್ಸದಿನ ತೋರುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿದ್ದಾರೆ.
ADVERTISEMENT
ADVERTISEMENT