ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಇದುವರೆಗೂ ನೀಡಲಾಗುತ್ತಿದ್ದ ‘ಸಂಸದರ ಕೋಟಾ’ ಸೀಟುಗಳಿಗೆ ನೂತನವಾಗಿ ಪ್ರಕಟಿಸಿದ 2022-23 ನೇ ಸಾಲಿನ ಮಾರ್ಗಸೂಚಿಗಳಿಂದ ಕೇಂದ್ರ ಸರ್ಕಾರ ತೆಗೆದು ಹಾಕಿದೆ.
ಕೇವಲ ಸಂಸದರ ಕೋಟಾ ಮಾತ್ರವಲ್ಲದೇ, ಶಿಕ್ಷಣ ಸಚಿವಾಲಯದ ನೌಕರರ ಮಕ್ಕಳು, ಸಂಸದರ ಮಕ್ಕಳು, ಅವಲಂಬಿತ ಮೊಮ್ಮಕ್ಕಳು ಮತ್ತು ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಕೇಂದ್ರೀಯ ವಿದ್ಯಾಲಯ ನೌಕರರು, ಶಾಲಾ ಆಡಳಿತ ಸಮಿತಿ ಅಧ್ಯಕ್ಷರ ವಿವೇಚನಾ ಕೋಟಾ ಸೇರಿದಂತೆ ಇತರರಿಗೆ ಪ್ರವೇಶ ನೀಡಲು ಇದ್ದ “ವಿಶೇಷ ಅಧಿಕಾರ”ವನ್ನು ತೆಗೆದುಹಾಕಲಾಗಿದೆ.
ಕೇಂದ್ರೀಯ ವಿದ್ಯಾಲಯಗಳನ್ನು ಅಧಿಕೃತವಾಗಿ ಕೇಂದ್ರಿಯ ವಿದ್ಯಾಲಯ ಸಂಘಟನೆ ನಡೆಸಿಕೊಂಡು ಹೋಗುತ್ತದೆ. ಇದು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿದೆ. ಪ್ರವೇಶಕ್ಕಾಗಿ ಇದ್ದ ವಿಶೇಷ ನಿಬಂಧನೆಗಳನ್ನು ಪರಿಶೀಲಿಸಿದ ನಂತರ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ಹೇಳಿದೆ.
ಸಂಸದರ ಕೋಟಾ ಪ್ರಕಾರ, ಪ್ರತಿಯೊಬ್ಬ ಸಂಸದರು ಒಂದು ಶೈಕ್ಷಣಿಕ ಸಾಲಿನಲ್ಲಿ 1 ರಿಂದ 9 ನೇ ತರಗತಿಯವರೆಗೆ 10 ವಿದ್ಯಾರ್ಥಿಗಳನ್ನು ಕೇಂದ್ರೀಯ ವಿದ್ಯಾಲಯ ಶಾಲೆಗಳಿಗೆ ಶಿಫಾರಸ್ಸು ಮಾಡಬಹುದಾಗಿತ್ತು. ಈ ವಿದ್ಯಾರ್ಥಿಗಳ ಆಯಾ ಸಂಸದರ ಕ್ಷೇತ್ರದವರೇ ಆಗಿರಬೇಕಿತ್ತು.
1975 ರಲ್ಲಿ ವಿಶೇಷ ವಿತರಣಾ ಯೋಜನೆ ಅಡಿಯಲ್ಲಿ ಸಂಸದರಿಗೆ ಈ ಅಧಿಕಾರವನ್ನು ನೀಡಲಾಗಿತ್ತು. ದೇಶದಲ್ಲಿ 543 ಲೋಕಸಭಾ ಸದಸ್ಯರು ಹಾಗೂ 245 ಜನ ರಾಜ್ಯಾಸಭಾ ಸದಸ್ಯರು ಇದ್ದಾರೆ. ಇವರಿಂದ ಒಟ್ಟಾರೆಯಾಗಿ ದೇಶಾದ್ಯಂತ 7,880 ಜನ ವಿದ್ಯಾರ್ಥಿಗಳಿಗೆ ಶಿಫಾರಸ್ಸುಗಳ ಆಧಾರದ ಮೇಲೆ ಪ್ರವೇಶವನ್ನು ಕಲ್ಪಿಸಲಾಗುತ್ತಿತ್ತು. ಈ ವಿಶೇಷ ಸೌಲಭ್ಯವನ್ನು ಎರಡು ಬಾರಿ ಹಿಂತೆಗೆದುಕೊಂಡಿದ್ದರೂ, ಮರು ಜಾರಿಮಾಡಲಾಗಿದೆ.
ಅಧಿಕೃತ ಮೂಲಗಳ ಪ್ರಕಾರ, 2018-19 ನೇ ಶೈಕ್ಷಣಿಕ ಸಾಲಿನಲ್ಲಿ 8,164 ವಿದ್ಯಾರ್ಥಿಗಳು ಹಾಗೂ 2021-22 ನೇ ಶೈಕ್ಷಣಿಕ ಸಾಲಿನಲ್ಲಿ 7,301 ವಿದ್ಯಾರ್ಥಿಗಳು ಸಂಸದರ ಕೋಟಾದಡಿಯಲ್ಲಿ ಪ್ರವೇಶಾತಿಯನ್ನು ಪಡೆದಿದ್ದಾರೆ.
ಈ ಹಿಂದೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಶಿಕ್ಷಣ ಸಚಿವರಿಗೆ ಮೀಸಲಾದ ವಿವೇಚನಾ ಅಧಿಕಾರ ಬಳಸಿ 2019-20 ಮತ್ತು 2020-21 ರಲ್ಲಿ ಕ್ರಮವಾಗಿ 9,411 ಮತ್ತು 12,295 ವಿದ್ಯಾರ್ಥಿಗಳು ಸಂಸದರ ಕೋಟಾದಡಿ ಪ್ರವೇಶ ಪಡೆಯುವುದನ್ನು ತಡೆದಿದ್ದರು.
ಕೇಂದ್ರೀಯ ವಿದ್ಯಾಲಯದ ಪ್ರವೇಶಕ್ಕಾಗಿ ಇನ್ನೂ ಕೆಲವೊಂದು ವಿಶೇಷ ನಿಬಂಧನೆಗಳನ್ನು ಉಳಿಸಿಕೊಂಡಿದೆ. ಇದರಡಿಯಲ್ಲಿ ಪರಮವೀರ ಚಕ್ರ, ಮಹಾವೀರ ಚಕ್ರ, ವೀರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ ಮತ್ತು ಶೌರ್ಯ ಚಕ್ರ ಪಡೆದವರ ಮಕ್ಕಳು, ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ಪಡೆದವರು; ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW) ಉದ್ಯೋಗಿಗಳ 15 ಮಕ್ಕಳು, ಕೋವಿಡ್-19 ಕಾರಣದಿಂದಾಗಿ ಅನಾಥರಾದ ಮಕ್ಕಳು, ಉದ್ಯೋಗದ ಸಮಯದಲ್ಲಿ ಸಾವನ್ನಪ್ಪಿದ ಕೇಂದ್ರ ಸರ್ಕಾರಿ ನೌಕರರ ಮಕ್ಕಳು ಮತ್ತು ಲಲಿತಕಲೆಯಲ್ಲಿ ವಿಶೇಷ ಪ್ರತಿಭೆ ತೋರಿದ ಮಕ್ಕಳ ಕೋಟಾವನ್ನು ಉಳಿಸಿಕೊಂಡಿದೆ.