ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಅನೈತಿಕ ಪೊಲೀಸ್ಗಿರಿ ಸಂಬಂಧ ನಾಲ್ವರ ಮೇಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿಗೆ ಹೊರಟ್ಟಿದ್ದ ವಿದ್ಯಾರ್ಥಿನಿಯನ್ನು ಧರ್ಮಸ್ಥಳದ ಕೆಎಸ್ಆರ್ಟಿಸಿ ಬಸ್ಸ್ಯಾಂಡ್ಗೆ ಕರೆದುಕೊಂಡು ಹೋಗುತ್ತಿದ್ದ ಉಜಿರೆ ಮೂಲದ ಆಟೋ ಚಾಲಕ ಮಹಮ್ಮದ್ ಅಶಿಕ್ ಎಂಬ ಯುವಕನ ಮೇಲೆ ಅಡ್ಡಗಟ್ಟಿ ಹಲ್ಲೆ ನಡೆಸಲಾಗಿದೆ.
ಆಗಸ್ಟ್ 2ರಂದು ರಾತ್ರಿ 9 ಗಂಟೆಗೆ ನಡೆದಿರುವ ಕೃತ್ಯ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಐಪಿಸಿ ಕಲಂ 143, 147,341,323,504,506 ಮತ್ತು 149 ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳೆದ 2 ತಿಂಗಳಲ್ಲಿ ಐದನೇ ಪ್ರಕರಣ:
ಜೂನ್ 2ರಿಂದ ಆಗಸ್ಟ್ 2ರವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಒಟ್ಟು 5 ಅನೈತಿಕ ಪೊಲೀಸ್ಗಿರಿ ಪ್ರಕರಣ ದಾಖಲಾಗಿದೆ.
ಪ್ರಕರಣ 1:
ಜೂನ್ 2ರಂದು ಉಡುಪಿ ಜಿಲ್ಲೆಯ ಸೋಮೇಶ್ವರ ಕಡಲ ತೀರದಲ್ಲಿ ಮೂವರು ವಿದ್ಯಾರ್ಥಿನಿಯರು ಅನ್ಯ ಧರ್ಮದ ಮೂವರು ವಿದ್ಯಾರ್ಥಿಗಳೊಂದಿಗೆ ಇದ್ದರು ಎಂಬ ಕಾರಣಕ್ಕೆ ಹಿಂದೂ ಸಂಘಟನೆ ಆರು ಮಂದಿ ಸದಸ್ಯರು ಹಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ ಆರು ಮಂದಿ ದುಷ್ಕರ್ಮಿಗಳನ್ನು ಬಂಧಿಸಲಾಗಿತ್ತು.
ಪ್ರಕರಣ 2:
ಜುಲೈ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ನಲ್ಲಿ ರಾತ್ರಿ ಪತ್ನಿ ಮತ್ತು ಸಹೋದರಿ ಜೊತೆಗೆ ಊಟ ಮುಗಿಸಿ ಪೊಲೀಸ್ ಅಧಿಕಾರಿಯನ್ನು ಅಡ್ಡಗಟ್ಟಿ ಅನೈತಿಕ ಪೊಲೀಸ್ಗಿರಿ ನಡೆಸಲಾಗಿತ್ತು.
ವಿಚಿತ್ರ ಎಂದರೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಳ್ಯದಲ್ಲಿ ಕೊಲೆಯಾಗಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ತಂಡದಲ್ಲಿ ಆ ಪೊಲೀಸ್ ಅಧಿಕಾರಿ ಇದ್ದಾರೆ.
ಕೃತ್ಯ ಸಂಬಂಧ ಮನೀಶ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯ ಎಂಬ ಇಬ್ಬರು ಕಿಡಿಗೇಡಿಗಳನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣ 3:
ಜುಲೈ 29ರಂದು ಕಾರಿನಲ್ಲಿ ಪ್ರಯಾಣಿಸ್ತಿದ್ದ ಮಂಗಳೂರಿನ ಕಾಲೇಜಿನ ವೈದ್ಯರು ಮತ್ತು ಮಹಿಳಾ ಪ್ರೊಫೆಸರ್ಗಳನ್ನು ಕಾರ್ಕಳದ ಕುಂಟಲ್ಪಾಡಿಯಲ್ಲಿ ಅಡ್ಡಗಟ್ಟಿ ಹಿಂದೂ ಸಂಘಟನೆ ಕಾರ್ಯಕರ್ತರು ಬೆದರಿಕೆ ಹಾಕಿದ್ದರು.
ಈ ಪ್ರಕರಣ ಸಂಬಂಧ ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನಿಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಸಫಲಿಗ ಎಂಬ ನಾಲ್ವರನ್ನು ಬಂಧಿಸಲಾಗಿದೆ.
ಪ್ರಕರಣ 4:
ಜುಲೈ 29ರಂದು ಮಂಗಳೂರು ನಗರದ ಕಾವೂರಿನಲ್ಲಿ ಪತ್ರಕರ್ತ ಅಭಿಜಿತ್ ಕೊಲ್ಪೆ ಸ್ನೇಹಿತೆಯ ಜೊತೆಗೆ ರೆಸ್ಟೋರೆಂಟ್ನಲ್ಲಿ ಊಟ ಮಗಿಸಿ ಮಧ್ಯಾಹ್ನ 3 ಗಂಟೆಗೆ ಹೊರಬರುವ ವೇಳೆ ಇಬ್ಬರು ಕಿಡಿಗೇಡಿಗಳು ಅಡ್ಡಗಟ್ಟಿ ಧರ್ಮದ ಹೆಸರಲ್ಲಿ ಬೆದರಿಕೆ ಹಾಕಿದ್ದರು.
ಈ ಕೃತ್ಯ ಸಂಬಂಧ ಚೇತನ್ ಕುಮಾರ್ ಮತ್ತು ನವೀನ್ ವಿರುದ್ಧ ಎಫ್ಐಆರ್ ದಾಖಲಾಗಿ ಬಳಿಕ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ:
ಆಗಸ್ಟ್ 1ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನೈತಿಕ ಪೊಲೀಸ್ಗಿರಿಯನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕುವಂತೆ ಸೂಚಿಸಿದ್ದರು.
ಅಲ್ಲದೇ ಸಿಎಂ ಆದ ಬಳಿಕ ನಡೆಸಿದ ಪೊಲೀಸ್ ಅಧಿಕಾರಿಗಳ ಮೊದಲ ಸಭೆಯಲ್ಲಿ ಅನೈತಿಕ ಪೊಲೀಸ್ಗಿರಿ ವಿರುದ್ಧ ಕ್ರಮಕೈಗೊಳ್ಳದೇ ಹೋದರೆ ಇನ್ಸ್ಪೆಕ್ಟರ್ ಮತ್ತು ಡಿಸಿಪಿಯನ್ನು ಹೊಣೆ ಮಾಡುವ ಎಚ್ಚರಿಕೆ ನೀಡಿದ್ದರು.
ಜೂನ್ 6ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅನೈತಿಕ ಪೊಲೀಸ್ಗಿರಿ ಮಟ್ಟಹಾಕಲು ವಿಶೇಷ ಕಾರ್ಯಪಡೆ ರಚಿಸುವ ಘೋಷಣೆ ಮಾಡಿದ್ದರು.
ಆ ಬಳಿಕ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರು ವಿಶೇಷ ತಂಡವನ್ನು ರಚಿಸಿದ್ದರು. ಆ ಬಳಿಕ ಅನೈತಿಕ ಪೊಲೀಸ್ಗಿರಿ ಕೃತ್ಯದಲ್ಲಿ ಪದೇ ಪದೇ ಭಾಗಿ ಆಗಿದ್ದ ಮೂವರಿಗೆ ನಿಮ್ಮನ್ನು ಯಾಕೆ ಗಡೀಪಾರು ಮಾಡಬಾರದು ಎಂದು ನೋಟಿಸ್ ನೀಡಲಾಗಿದೆ.
2019ರಿಂದ ಕಳೆದ ವರ್ಷದ ಮಾರ್ಚ್ ಅಂತ್ಯಕ್ಕೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ 32 ಅನೈತಿಕ ಪೊಲೀಸ್ಗಿರಿ ಪ್ರಕರಣ ದಾಖಲಾಗಿತ್ತು. ಇವುಗಳಲ್ಲಿ 12 ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಯಲ್ಲಿ, 11 ಪ್ರಕರಣ ಮಂಗಳೂರು ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ, ಉಡುಪಿ ಜಿಲ್ಲೆಯಲ್ಲಿ 6 ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 2 ಪ್ರಕರಣ ದಾಖಲಾಗಿತ್ತು.
2021ರಲ್ಲಿ ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಅನೈತಿಕ ಪೊಲೀಸ್ಗಿರಿ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಠಾಣೆಗೆ ತೆರಳಿ ಬಿಡಿಸಿಕೊಂಡು ಬಂದಿದ್ದರು. ಅನೈತಿಕ ಪೊಲೀಸ್ಗಿರಿ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಸಮರ್ಥಿಸಿಕೊಂಡಿದ್ದರು.
ADVERTISEMENT
ADVERTISEMENT