ಇದೇ ಜೂನ್.5 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಹಿಂದೆ ಮೇ 27ರಂದೇ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಮುಂಗಾರು ಕೊಂಚ ವಿಳಂಬವಾಗಲಿದ್ದು, ಇನ್ನೆರಡು ದಿನಗಳಲ್ಲಿ ಕೇರಳಕ್ಕೆ ಮಾನ್ಸೂನ್ ಪ್ರವೇಶವಾಗುವ ಸಾಧ್ಯತೆಯಿದೆ. ತದನಂತರ ಜೂನ್.5 ರಂದುರಾಜ್ಯದಲ್ಲೂ ಮುಂಗಾರು ಆರಂಭವಾಗಲಿದೆ ಎಂದು ತಿಳಿಸಿದೆ.
ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಈ ಬಾರಿ ವಾಡಿಕೆಗಿಂತ ಮೊದಲೇ ಅಂದರೆ ಮೇ 16ಕ್ಕೆ ಅಂಡಮಾನ್ ಅನ್ನು ಮುಂಗಾರು ತಲುಪಿತ್ತು. ಆದರೆ, ಆರು ದಿನಗಳ ವಿರಾಮದ ಬಳಿಕ ಈಗ ಶ್ರೀಲಂಕಾದಿಂದ ಕೇರಳದ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಕೇರಳಕ್ಕೆ ಆಗಮಿಸುವುದು ಮಾತ್ರವೇ ಬಾಕಿ ಇದೆ ಎನ್ನಲಾಗಿದೆ.
ಮಾನ್ಸೂನ್ ಜೂನ್ 1 ರಂದು ಕೇರಳ ರಾಜ್ಯವನ್ನು ಪ್ರವೇಸಿಸಿದರೆ, ಜೂನ್ 5 ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕೆಲ ಭಾಗಗಳನ್ನು ಮುಟ್ಟಲಿದೆ. ಜೂನ್ 10 ರ ವೇಳೆಗೆ ಅದು ಇಡೀ ರಾಜ್ಯವನ್ನು ಆವರಿಸುತ್ತದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಅಧಿಕಾರಿಗಳು ತಿಳಿಸಿದ್ದಾರೆ.