ADVERTISEMENT
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ, ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ.
ಆದರೆ ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ ಸರಾಸರಿ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಜುಲೈ 6ರ ಗುರುವಾರ ಬೆಳಗ್ಗೆ 8 ಗಂಟೆವರೆಗೆ ಆಗಿರುವ ಮಳೆಯ ಪ್ರಮಾಣ ಕಡಿಮೆಯೇ.
ದಕ್ಷಿಣ ಒಳನಾಡು ಭಾಗದಲ್ಲಿ ಜೂನ್ 1ರಿಂದ ಜುಲೈ 6ರವರೆಗೆ ವಾಡಿಕೆಯ 74 ಮಿಲಿ ಮೀಟರ್ ಮಳೆ ಆಗುತ್ತಿತ್ತು. ಈ ಬಾರಿ 67 ಮಿಲಿ ಮೀಟರ್ ಮಳೆ ಆಗಿದ್ದು ಶೇಕಡಾ 9ರಷ್ಟು ಮಳೆ ಕೊರತೆಯಾಗಿದೆ.
ಉತ್ತರ ಒಳನಾಡು ಭಾಗದಲ್ಲಿ ವಾಡಿಕೆಯ 118 ಮಿಲಿ ಮೀಟರ್ ಮಳೆಯಾಗ್ತಿತ್ತು. ಈ ಬಾರಿ 70 ಮಿಲಿ ಮೀಟರ್ ಮಳೆಯಾಗಿದ್ದು ಶೇಕಡಾ 41ರಷ್ಟು ಮಳೆ ಕೊರತೆಯಾಗಿದೆ.
ಮಲೆನಾಡು ಭಾಗದಲ್ಲಿ ವಾಡಿಕೆಯ 464 ಮಿಲಿ ಮೀಟರ್ ಮಳೆ ಆಗ್ತಿತ್ತು. ಆದರೆ 150 ಮಿಲಿ ಮೀಟರ್ ಮಳೆಯಾಗಿದ್ದು, ಶೇಕಡಾ 68ರಷ್ಟು ಕೊರತೆಯಾಗಿದೆ.
ಕರಾವಳಿ ಭಾಗದಲ್ಲಿ ಸರಾಸರಿ 1,023 ಮಿಲಿ ಮೀಟರ್ ಮಳೆ ಆಗ್ತಿತ್ತು. ಈ ಬಾರಿ 594 ಮಿಲಿ ಮೀಟರ್ ಮಳೆಯಾಗಿದ್ದು, ಶೇಕಡಾ 42ರಷ್ಟು ಕೊರತೆ ಉಂಟಾಗಿದೆ.
ಒಟ್ಟಾರೆ ರಾಜ್ಯದಲ್ಲಿ ಜೂನ್ 1ರಿಂದ ಜುಲೈ 6ರವರೆಗೆ ಸರಾಸರಿ 241 ಮಿಲಿ ಮೀಟರ್ ಮಳೆ ಆಗಿತ್ತು. ಆದರೆ ಈ ಅವಧಿಯಲ್ಲಿ ಈ ಬಾರಿ 132 ಮಿಲಿ ಮೀಟರ್ ಮಳೆಯಾಗಿದ್ದು ಶೇಕಡಾ 45ರಷ್ಟು ಕೊರತೆ ಉಂಟಾಗಿದೆ.
13 ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಮೈಸೂರು, ಹಾಸನ, ಹಾವೇರಿ, ಧಾರವಾಡ, ದಾವಣಗೆರೆ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.
14 ಜಿಲ್ಲೆಗಳಾದ ಬಾಗಲಕೋಟೆ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ಮಂಡ್ಯದಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇವತ್ತು ಬೆಳಗ್ಗೆ 8 ಗಂಟೆಯವರೆಗೆ ಒಂದೇ ದಿನದಲ್ಲಿ ರಾಜ್ಯದಲ್ಲೇ ಅತ್ಯಧಿಕ 311 ಮಿಲಿ ಮೀಟರ್ ಮಳೆಯಾಗಿದೆ.
ADVERTISEMENT