ಪ್ರಧಾನಿ ಮೋದಿ ಪದವಿ ಉಲ್ಲೇಖಿಸಿ ಮಾನಹಾನಿ – ಕೇಜ್ರಿವಾಲ್​ಗೆ ಗುಜರಾತ್​ ಕೋರ್ಟ್​ ಸಮನ್ಸ್​

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ  ಅರೋಪದಡಿಯಲ್ಲಿ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಮತ್ತು ರಾಜ್ಯಸಭಾ ಸಂಸದ ಸಂಜಯ್​ ಸಿಂಗ್​ ಅವರಿಗೆ ಗುಜರಾತ್​ ಕೋರ್ಟ್​ ಸಮನ್ಸ್​ ಜಾರಿ ಮಾಡಿದೆ.
ಜೂನ್​ 13ರಂದು ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಅಹಮದಾಬಾದ್​ನ ಕೋರ್ಟ್​ ಸೂಚಿಸಿದೆ.
ಐಪಿಸಿ ಸೆಕ್ಷನ್​ 500ರ ಅಡಿಯಲ್ಲಿ ಕೇಜ್ರಿವಾಲ್​ ಮತ್ತು ಸಂಜಯ್​ ಸಿಂಗ್ ವಿರುದ್ಧ ಗುಜರಾತ್​ ವಿಶ್ವವಿದ್ಯಾಲಯ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಮೇಲ್ನೋಟಕ್ಕೆ ಇದು ಮಾನಹಾನಿ ಪ್ರಕರಣ ಎಂದು ಕೋರ್ಟ್​ ಅಭಿಪ್ರಾಯಪಟ್ಟಿದೆ.
ಪ್ರಧಾನಿ ಮೋದಿ ಅವರ ಪದವಿ ಪ್ರಮಾಣಪತ್ರದ ಮಾಹಿತಿಯನ್ನು ಬಹಿರಂಗಗೊಳಿಸಬೇಕಿಲ್ಲ ಎಂದು ತೀರ್ಪು ನೀಡಿದ್ದ ಗುಜರಾತ್​ನ ಹೈಕೋರ್ಟ್​ ಕೇಜ್ರಿವಾಲ್​ ಅವರ ಮೇಲೆ 25 ಸಾವಿರ ರೂಪಾಯಿ ದಂಡ ವಿಧಿಸಿತ್ತು.
ಹೈಕೋರ್ಟ್​ ತೀರ್ಪಿನ ಬಳಿಕ ಕೇಜ್ರಿವಾಲ್​ ಮತ್ತು ಸಂಜಯ್​ ಸಿಂಗ್​ ಮಾಧ್ಯಮಗಳಲ್ಲಿ ಮತ್ತು ಟ್ವಿಟ್ಟರ್​ನಲ್ಲಿ ಹೇಳಿಕೆಗಳನ್ನು ಕೊಡುವ ಮೂಲಕ ಪ್ರಧಾನಿಯವರ ಮಾನಹಾನಿ ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯ ಅಹಮದಾಬಾದ್​ನ ಮೆಟ್ರೋಪಾಲಿಟನ್​ ಮ್ಯಾಜಿಸ್ಟ್ರೆಟ್​ ಕೋರ್ಟ್​ನಲ್ಲಿ ದಾವೆ ಹೂಡಿತ್ತು.
ಇದೇ ಮಾರ್ಚ್​ನಲ್ಲಿ ಗುಜರಾತ್​ನ ಸೂರತ್​ ಕೋರ್ಟ್​ ಪ್ರಧಾನಿ ಮೋದಿ ಅವರ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ಬಳಿಕ ರಾಹುಲ್​ ಲೋಕಸಭಾ ಸದಸ್ಯ ಸ್ಥಾನವನ್ನೂ ಕಳೆದುಕೊಂಡಿದ್ದರು.