ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಿಂದನಾತ್ಮಕ ಟ್ವೀಟ್ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಗುಜರಾತ್ ಶಾಸಜ ಜಿಗ್ನೇಶ್ ಮೇವಾನಿಯವರನ್ನು ಪೊಲೀಸರು ಜೈಲಿಗೆ ತಳ್ಳಿದ್ದರು. ಇದೀಗ, ಅವರಿಗೆ ಈ ಪ್ರಕರಣದಲ್ಲಿ ಜಾಮೀನು ದೊರೆಯುತ್ತಿದ್ದಂತೆ ಮತ್ತೆ ಅಸ್ಸಾಂ ಪೊಲೀಸರು ಮರು ಬಂಧಿಸಿದ್ದಾರೆ.
ಪ್ರಧಾನಿ ಮೋದಿಯವರನ್ನು ಶಾಸಕ ಜಿಗ್ನೇಶ್ ಮೇವಾನಿ ನಿಂದನಾತ್ಮಕ ಟ್ವೀಟ್ಗಳನ್ನು ಮಾಡಿ ಅವಮಾನ ಮಾಡಿದ್ದಾರೆ ಎಂದು ಅಸ್ಸಾಂ ಕೊಕ್ರಾಝರ್ನ ಬಿಜೆಪಿ ನಾಯಕ ಅರೂಪ್ ಕುಮಾರ್ ಡೇ ಅವರು ಪ್ರಕರಣ ದಾಖಲಿಸಿದ್ದರು. ಗುಜರಾತ್ನ ಪಾಲನ್ಪುರದ ಸರ್ಕಿಟ್ಹೌಸ್ನಲ್ಲಿ ಜಿಗ್ನೇಶ್ ಮೇವಾನಿಯವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ನಿನ್ನೆಯಷ್ಟೇ ಈ ಪ್ರಕರಣದ ವಿಚಾರಣೆ ನಡೆಸಿದ್ದ ಅಸ್ಸಾಂನ ನ್ಯಾಯಾಲಯ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಜಿಗ್ನೇಶ್ ಮೇವಾನಿಯವರಿಗೆ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಆದರೆ, ಜಿಗ್ನೇಶ್ ಮೇವಾನಿ ಜಾಮೀನು ಪಡೆದು ಜೈಲಿನಿಂದ ಹೊರಬರುತ್ತಲೇ ಅಸ್ಸಾಂನ ಬಾರ್ಪೇಟಾ ಪೊಲೀಸರು ಬಂದಿಸಿದ್ದಾರೆ. ಈ ಬಂಧನಕ್ಕೆ ಪೊಲೀಸರು ಇದುವರೆಗೂ ಯಾವುದೇ ಕಾರಣಗಳನ್ನು ನೀಡಿಲ್ಲ.
ಜಾಮೀನು ದೊರೆತ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶಾಸಕ ಜಿಗ್ನೇಶ್ ಮೇವಾನಿಯವರು, ನನ್ನ ಪ್ರತಿಷ್ಠೆಯನ್ನು ಕುಂದಿಸಲು ಆರ್ಎಸ್ಎಸ್ ಮತ್ತು ಬಿಜೆಪಿ ಕುತಂತ್ರ ನಡೆಸುತ್ತಿವೆ. ನನ್ನ ವಿರುದ್ದ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ರೋಹಿತ್ ವೇಮುಲು, ಚಂದ್ರಶೇಖರ್ ಅಜಾದ್ ಅವರಿಗೆ ಮಾಡಿದ್ದನ್ನೇ ನನಗೆ ಮಾಡಿದ್ದಾರೆ. ಪ್ರಧಾನಿ ಕಾರ್ಯಲಯ ಸೇಡಿನ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.