ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ (Minister Ashwath Narayan) ಅವರು ಬಿಎಮ್ಎಸ್ ಶಿಕ್ಷಣ ಟ್ರಸ್ಟ್ನಲ್ಲಿ 15 ಸಾವಿರ ಕೋ. ರೂ. ಹಗರಣ ಎಸಗಿದ್ದಾರೆ. ಆದ್ದರಿಂದ, ಸಚಿವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಗುರುವಾರ ನಡೆದ ವಿದಾನಸಭೆ ಕಲಾಪದಲ್ಲಿ ಕುಮಾರಸ್ವಾಮಿಯವರು ಬಿಎಮ್ಎಸ್ ಟ್ರಸ್ಟ್ನಲ್ಲಿ ಅಶ್ವಥ್ ನಾರಾಯಣ್ ಮಾಡಿರುವ ಅಕ್ರಮಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದರು. ಅಲ್ಲದೇ, ದಾಖಲೆಗಳನ್ನು ಬಿಡುಗಡೆಗೊಳಿಸಿದ್ದರು.
ಸರಕಾರಕ್ಕೆ 3 ಬೇಡಿಕೆಗಳನ್ನು ಇಟ್ಟಿರುವ ಕುಮಾರಸ್ವಾಮಿಯವರು, 1) ಬಿಎಮ್ಎಸ್ ಟ್ರಸ್ಟ್ನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು. 2) ಟ್ರಸ್ಟ್ ಮತ್ತು ಆ ಟ್ರಸ್ಟ್ನ ಎಲ್ಲಾ ಸ್ವತ್ತುಗಳನ್ನು ರಾಜ್ಯ ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು. ಹಾಗೂ 3) ಸಚಿವ ಅಶ್ವಥ್ ನಾರಾಯಣ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ವಿಧಾನಸಭೆಯಲ್ಲೇ ಎಲ್ಲವನ್ನೂ ದಾಖಲೆ ಸಮೇತ ಇಟ್ಟಿದ್ದೇನೆ. ಆ ದಾಖಲೆಗಳೇ ಎಲ್ಲವನ್ನೂ ಮಾತನಾಡುತ್ತಿವೆ. ಇನ್ನು ನನ್ನ ಹೊಡೆದ ಗುಂಡು ಎಲ್ಲಿ ವಿಫಲವಾಗಿದೆ? ಅದನ್ನು ವಿಫಲಗೊಳಿಸುವ ಇನ್ನೊಂದು ಹುನ್ನಾರ, ಷಡ್ಯಂತ್ರ ಈಗ ನಡೆದಿದೆ ಅಷ್ಟೇ.
ಇದನ್ನೂ ಓದಿ : ಮೂರಂಕಿ ಮೀರದ ನೀವು ವಿಕೃತಿ ಮೆರೆದು ರಕ್ತಪಾತ ಸೃಷ್ಟಿಸುತ್ತಿದ್ದೀರಿ – ಬಿಜೆಪಿಗೆ ಹೆಚ್ಡಿಕೆ ತರಾಟೆ
BMS ಟ್ರಸ್ಟ್ ಬಗ್ಗೆ ಬಿಜೆಪಿ ಸರಕಾರ ಕಾನೂನು ರೀತ್ಯ ಕ್ರಮ ವಹಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ. ಕಾನೂನು ರೀತ್ಯ ಕ್ರಮ ಎಂದರೆ, ಸಾವಿರಾರು ಕೋಟಿ ರೂ. ಮೌಲ್ಯದ ಸರಕಾರಿ ಸ್ವತ್ತನ್ನು ಸದ್ದಿಲ್ಲದೆ ಖಾಸಗಿ ರಿಯಲ್ ಎಸ್ಟೇಟ್ ಪಟ್ಟಭದ್ರರಿಗೆ ಧಾರೆ ಎರೆದುಕೊಡುವುದಾ ಸಚಿವರೇ?
ಸದನದಲ್ಲಿ ನಾನಿಟ್ಟ ಪ್ರತಿ ದಾಖಲೆ ಅಕ್ರಮಕ್ಕೆ ಕನ್ನಡಿ. ನಿಮ್ಮ ಕಣ್ಣಿಗೆ ಈ ಅಕ್ರಮವೆಲ್ಲಾ ಸಕ್ರಮವಾಗಿದ್ದರೆ, ಇದಕ್ಕಿಂತ ದುರಂತ ಇನ್ನೊಂದಿಲ್ಲ. ಎಲ್ಲಾ ದಾಖಲೆಗಳನ್ನು ಮತ್ತೊಮ್ಮೆ ನೋಡಿ. ಅಷ್ಟೂ ಆಸ್ತಿಯನ್ನು ಲಪಟಾಯಿಸಲು ಟ್ರಸ್ಟ್ʼನಲ್ಲಿ ನಡೆದ ಷಡ್ಯಂತ್ರಕ್ಕೆ ಸಚಿವರಾಗಿ ನೀವು ಹೇಗೆಲ್ಲಾ ಸಹಕಾರ ನೀಡಿದ್ದೀರಿ ಎನ್ನುವುದು ಈಗ ಜಗಜ್ಜಾಹೀರು
ಉನ್ನತ ಶಿಕ್ಷಣ ಸಚಿವರೇ, 1957ರಲ್ಲಿ ರಚನೆಗೊಂಡು ನೋಂದಣಿಯಾದ BMS ಟ್ರಸ್ಟಿನ ಮೂಲ ಡೀಡನ್ನು ಒಮ್ಮೆ ಓದಿ. ದಾನಿ ಟ್ರಸ್ಟಿ, ಆಜೀವ ಟ್ರಸ್ಟಿ ನೇಮಕದ ಬಗ್ಗೆ ಇರುವ ಷರತ್ತುಗಳನ್ನೂ ತಿಳಿಯಿರಿ. ಆದರೆ, ನೀವು ಜನರಿಗೆ & ಸರಕಾರಕ್ಕೆ ಸೇರಿದ ಇಡೀ ಟ್ರಸ್ಟಿನ ಆಸ್ತಿ ಹೊಡೆಯಲು ನಿಂತವರ ಪರ ನಾಚಿಕೆ ಇಲ್ಲದೆ ವಕಾಲತ್ತು ವಹಿಸುತ್ತಿದ್ದೀರಿ
BMS ಎಂಜೀಯರಿಂಗ್ ಕಾಲೇಜಿನಲ್ಲಿ ಸೀಟ್ ಬ್ಲಾಕಿಂಗ್, ಪೇಮೆಂಟ್ ಸೀಟುಗಳನ್ನು 50:50 ರಂತೆ ಟ್ರಸ್ಟಿಗಳಿಬ್ಬರು ಹಂಚಿಕೊಂಡಿದ್ದು ನಿಮ್ಮ ಗಮನಕ್ಕೆ ಬರಲಿಲ್ಲವೇ? ಕಾಮೆಡ್-ಕೆ ಆಕ್ಷೇಪಣಾ ಪತ್ರ, ಸರಕಾರದ ಇಬ್ಬರು ಅಧಿಕಾರಿಗಳು ಟ್ರಸ್ಟಿನ ಅಕ್ರಮಗಳ ಬಗ್ಗೆ ಬರೆದ ಪತ್ರಗಳನ್ನು ನೀವು ಓದಲಿಲ್ಲವೇ ಸಚಿವರೇ? ಓದಲಿಲ್ಲ ಎಂದರೆ, ಅದಕ್ಕೆ ಕಾರಣವೇನು?
ಇದನ್ನೂ ಓದಿ : ಕನ್ನಡದ ಹಿರಿಯ ನಟ ‘ಅಶ್ವಥ್ ನಾರಾಯಣ್’ ಇನ್ನಿಲ್ಲ
ನಮ್ಮ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಬಹಳ ಕ್ರಮ ಕೈಗೊಂಡಿದ್ದೇವೆ ಎನ್ನುತ್ತೀರಿ. ಸುಧಾರಣೆ ಎಂದರೆ, ಸಾರ್ವಜನಿಕ ಟ್ರಸ್ಟುಗಳನ್ನು ಹೀಗೆ ನುಂಗಿ ನೀರು ಕುಡಿಯಲು ಒಳಗೊಳಗೇ ಸಹಕಾರ ನೀಡುವುದಾ? ಪ್ರಧಾನಿ ಮೋದಿ ಅವರು ಹೇಳಿಕೊಟ್ಟ ವಿಶ್ವಗುರು ಪರಿಕಲ್ಪನೆ ಇದೇನಾ? ಶೈಕ್ಷಣಿಕೋದ್ಧಾರ ಮಾಡುವುದು ಎಂದರೆ ಹೀಗೆನಾ?
2018ರಲ್ಲಿ ನನ್ನ ನೇತೃತ್ವದ ಸರಕಾರವು ದಾನಿ ಟ್ರಸ್ಟಿ, ಅಜೀವ ಟ್ರಸ್ಟಿ ನೇಮಕದ ಬಗ್ಗೆ BMS ಟ್ರಸ್ಟಿನಲ್ಲಿ ಕೈಗೊಂಡಿದ್ದ ತಿದ್ದುಪಡಿಗಳು ಅಕ್ರಮ ಎಂದು ಸಾರಿ, ಆ ತಿದ್ದುಪಡಿಗಳನ್ನು ಸಾರಾಸಗಟಾಗಿ ತಿರಸ್ಕರಿತ್ತು. ನನ್ನ ಸರಕಾರ ಹೋದ ಮೇಲೆ ಬಂದ ಬಿಜೆಪಿ ಸರಕಾರ ಈ ಅಕ್ರಮ ತಿದ್ದುಪಡಿಗಳನ್ನು ಶರವೇಗದಲ್ಲಿ ಪುರಸ್ಕರಿಸಿದ್ದು ಹೇಗೆ?
ಟ್ರಸ್ಟಿನಲ್ಲಿ ಸರಕಾರದ ಟ್ರಸ್ಟಿಗೇ ಕೊಕ್ ಕೊಟ್ಟು, ಈ ಟ್ರಸ್ಟಿನಲ್ಲಾಗುತ್ತಿದ್ದ ಗೋಲ್ʼಮಾಲ್ ಬಗ್ಗೆ ಸರಕಾರಿ ಟ್ರಸ್ಟಿಯಾಗಿದ್ದ ಐಎಎಸ್ ಅಧಿಕಾರಿ ಡಾ.ಮಂಜುಳಾ ಮತ್ತು ಇನ್ನೊರ್ವ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಬರೆದ ಪತ್ರಗಳನ್ನು ಕಸದಬುಟ್ಟಿಗೆ ಹಾಕಿದ್ದು ಏಕೆ? ಇದರ ಹಿಂದಿನ ಹುನ್ನಾರ ಏನು ಉನ್ನತ ಶಿಕ್ಷಣ ಸಚಿವರೇ?
ಟ್ರಸ್ಟಿನಲ್ಲಿ ಕೈಗೊಂಡ ಅಕ್ರಮ ತಿದ್ದುಪಡಿಗಳನ್ನು ಸಕ್ರಮಗೊಳಿಸಲು ತಾವು ತೋರಿದ ಆತುರ, ಕಾಳಜಿ ಎಂಥದ್ದು ಎಂಬುದು ನನಗೆ ಗೊತ್ತು. ಅವುಗಳ ಅನುಮೋದನೆಗಾಗಿ ತಾವೇ ಬರೆದ ಟಿಪ್ಪಣಿಯ ಒಕ್ಕಣಿಯನ್ನು ಒಮ್ಮೆ ಓದಿಕೊಳ್ಳಿ ಅಶ್ವತ್ಥನಾರಾಯಣ ಅವರೇ. ಉನ್ನತ ಶಿಕ್ಷಣ ಸಚಿವರಾದ ನಿಮ್ಮ ಉನ್ನತ ಮಟ್ಟ ಎಷ್ಟು ಕೆಳಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಅಶ್ವಥ್ ನಾರಾಯಣ್ (Minister Ashwath Narayan) ವಿರುದ್ಧ ಕುಮಾರಸ್ವಾಮಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವಿಧಾನಸಭೆ ಚುನಾವಣೆಗೆ ನಿಖಿಲ್ ಸ್ಪರ್ಧಿಸಲ್ಲ : ಹೆಚ್ಡಿ ಕುಮಾರಸ್ವಾಮಿ