HeavyRains: ಉತ್ತರದಲ್ಲಿ ಭೀಕರ ಪ್ರವಾಹ.. ಕೊಚ್ಚಿ ಹೋದ ಬಸ್.. ಕಟ್ಟಡಗಳು..

ಉತ್ತರಭಾರತದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಭೀಕರ ಅನಾಹುತಗಳನ್ನು ಸೃಷ್ಟಿಸಿದೆ. ಹಿಮಾಚಲಪ್ರದೇಶ, ಉತ್ತರಾಖಂಡ್​, ದೆಹಲಿ, ಪಂಜಾಬ್, ಹರಿಯಾಣ, ಜಮ್ಮುಕಾಶ್ಮೀರದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ದೆಹಲಿ ಬಳಿ ಹರಿಯುವ ಯಮನೆ ಉಕ್ಕೇರಿದೆ. ದೆಹಲಿಯಲ್ಲಿ ಪ್ರವಾಹ ಎಚ್ಚರಿಕೆ ಜಾರಿ ಮಾಡಲಾಗಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ದೆಹಲಿಯ ಹಳೆ ರೈಲ್ವೇ ಬ್ರಿಡ್ಜ್ ಬಳಿ ಯಮುನೆಯ ನೀರಿನ ಮಟ್ಟ 203.33 ಮೀಟರ್​ನಷ್ಟಿತ್ತು.

ಹರಿಯಾಣದ ಹತಿನ್​ಕುಂಡ್​ ಬ್ಯಾರೇಜ್​ನಿಂದ ಇಂದು ಬೆಳಗ್ಗೆ ಯಮುನಾ ನದಿಗೆ 2.79 ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟ ಕಾರಣ ನದಿ ಅಪಾಯದ ಮಟ್ಟ ಮೀರಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ದೆಹಲಿ ಪ್ರವಾಹದಲ್ಲಿ ಸಿಲುಕುವ ಸಂಭವ ಇದೆ.

ಈಗಾಗಲೇ ದೆಹಲಿಯ ತಗ್ಗು ಪ್ರದೇಶಗಳೆಲ್ಲಾ ಜಲಮಯವಾಗಿವೆ. ಜನಸಾಮಾನ್ಯರು ಪರದಾಡುತ್ತಿದ್ದಾರೆ. ಪ್ರಗತಿ ಮೈದಾನದ ಟನ್ನೆಲ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ದೆಹಲಿ ಸಚಿವಾಲಯದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಹತ್ವದ ಸಭೆ ನಡೆಸಲಿದ್ದಾರೆ. ಈಗಾಗಲೇ 16 ಕಂಟ್ರೋಲ್ ರೂಂ ತೆರೆಯಲಾಗಿದೆ. ದೆಹಲಿ, ನೋಯ್ಡಾ, ಗುರುಗ್ರಾಮ್​ನಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಿಮಾಚಲದಲ್ಲಿ ಬಿಯಾಸ್ ಉಗ್ರರೂಪ

ಹಿಮಾಚಲಪ್ರದೇಶದಲ್ಲಿ ಬಿಯಾಸ್ ನದಿ ಉಗ್ರರೂಪ ತಾಳಿದೆ. ನದಿಯ ರೌದ್ರಾವತಾರಕ್ಕೆ ಇಡೀ ಹಿಮಾಚಲಲವೇ ಬೆಚ್ಚಿ ಬಿದ್ದಿದೆ. ತನ್ನ ಹಾದಿಯಲ್ಲಿ ಸಿಗುವುದನ್ನೆಲ್ಲಾ ಆಪೋಷನ ಪಡೆಯುತ್ತಿದೆ.

ಈವರೆಗೂ 10ಕ್ಕೂ ಹೆಚ್ಚು ಸೇತುವೆಗಳು ನದಿಯ ಪಾಲಾಗಿವೆ. ಹೆದ್ದಾರಿಗಳು ಕೊಚ್ಚಿ ಹೋಗಿವೆ. ನದಿಯಂಚಿನ ಭವನಗಳು ನೋಡನೋಡುತ್ತಲೇ ಕುಸಿದಿವೆ.

ದೊಡ್ಡ ದೊಡ್ಡ ಮರಗಳು, ವಿದ್ಯುತ್ ಕಂಬಗಳು, ಕಾರುಗಳು, ಬಸ್​ಗಳು ಕೂಡ ನದಿಯ ಪಾಲಾಗುತ್ತಿವೆ. 

ಡೆಹ್ರಾಡೂನ್​ ಬಳಿ ಬಸ್ಸೊಂದು ಪ್ರವಾಹದಲ್ಲಿ ಸಿಲುಕಿತ್ತು. ಪ್ರಯಾಣಿಕರು ಕಿಟಕಿಗಳಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯರು ಆ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಮುಂದಿನ ಕೆಲ ಗಂಟೆಗಳಲ್ಲಿ ಅತೀ ಭಾರೀ ವರ್ಷಧಾರೆ ಆಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. 10 ಜಿಲ್ಲೆಗಳಿಗೆ ರೆಡ್​ ಅಲರ್ಟ್ ಘೋಷಿಸಲಾಗಿದೆ.

ತುರ್ತು ಅಗತ್ಯಗಳಿಗೆ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಮನೆಯಿಂದ ಹೊರಬರಬಾರದು ಎಂದು ಹಿಮಾಚಲ ಪ್ರದೇಶದ ಜನತೆಗೆ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಉತ್ತರಾಖಂಡ್​, ಉತ್ತರ ಪ್ರದೇಶದಲ್ಲಿಯೂ ಪ್ರವಾಹ ಪರಿಸ್ಥಿತಿ ಇದೆ.. ತಗ್ಗುಪ್ರದೇಶಗಳೆಲ್ಲಾ ಜಲಮಯವಾಗಿವೆ. ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್​, ಅಗ್ನಿಶಾಮಕ ಪಡೆಗಳು ಪ್ರಾಣದ ಹಂಗು ತೊರೆದು ಪ್ರವಾಹದಲ್ಲಿ ಸಿಲುಕಿದವರನ್ನು ಕಾಪಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here