ಮಂಗಳೂರು ನಗರದ ಹೊರವಲಯದ ಮರವೂರು ಸಮೀಪದ ಫಲ್ಗುಣಿ ನದಿಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ನದಿ ನೀರು ಕೂಡಾ ಕಪ್ಪು ಬಣ್ಣಕ್ಕೆ ತಿರುಗಿದೆ.
ಮಂಗಳೂರು ನಗರದ ಸುತ್ತಮುತ್ತಲ ಕೈಗಾರಿಕಾ ತ್ಯಾಜ್ಯ ಫಲ್ಗುಣಿ ನದಿ ಸೇರುತ್ತಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದಲ್ಲದೆ ಬೈಕಂಪಾಡಿ ಕೈಗಾರಿಕಾ ವಲಯದಿಂದ ಫಲ್ಗುಣಿ ನದಿ ಸೇರುವ ತೋಕೂರು ಹಳ್ಳವು ಕಪ್ಪು ಬಣ್ಣದಿಂದ ಕೂಡಿದ್ದು, ವಾಸನೆ ಬರುತ್ತಿದೆ.
ಕಳೆದ ಸುಮಾರು ಒಂದು ತಿಂಗಳಿನಿಂದ ಫಲ್ಗುಣಿ ನದಿ ಹಾಗೂ ತೋಕೂರು ಹಳ್ಳದಲ್ಲಿ ಈ ಸ್ಥಿತಿ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.