ವರ ವಧುವಿನ ಕೊರಳಿಗೆ ಹೂವಿನ ಹಾರ ಹಾಕುವಾಗ ಕೈ ತಾಗಿದೆ ಎಂದು ಆರೋಪಿಸಿರುವ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.
ತಾಳಿ ಕಟ್ಟುವ ಮೊದಲು ಸಂಪ್ರದಾಯದಂತೆ ಹಾರ ಬದಲಾಯಿಸಿಕೊಳ್ಳುವ ಕಾರ್ಯಕ್ರಮದ ವೇಳೆ ವರನ ಕೈ ವಧುವಿಗೆ ತಾಗಿದೆ. ಈ ವೇಳೆ ವಧು ವರನ ಮೇಲೆ ನಖಶಿಕಾಂತ ಕೋಪಗೊಂಡಿದ್ದಾಳೆ. ಈ ವೇಳೆ ಕುಟುಂಬದವರು ವಧುವಿಗೆ ಸಮಾಧಾನಪಡಿಸಿದ್ದಾರೆ. ಆದರೆ, ತಾಳಿ ಕಟ್ಟುವ ಶುಭ ವೇಳೆ ಮತ್ತೆ ಕ್ಯಾತೆ ತೆಗದ ವಧು ಮದುವೆಯನ್ನೇ ನಿಲ್ಲಿಸಿದ್ದಾಳೆ.
ನಾರಾವಿ ದೇವಸ್ಥಾನದ ಸಮೀಪದಲ್ಲಿರುವ ಸಭಾ ಭವನದಲ್ಲಿ ಬೆಳ್ತಂಗಡಿ ತಾಲೂಕಿನ ವರ ಹಾಗೂ ಮೂಡುಕೊಣಾಜೆ ಮೂಲದ ಯುವತಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಎಲ್ಲರೂ, ಅಂದುಕೊಂಡಂತೆ ಆಗಿದ್ದರೆ ಇವರಿಬ್ಬರು ಸುಂದರ ದಂಪತಿಗಳಾಗಿರುತ್ತಿದ್ದರು.
ತಾಳಿ ಕಟ್ಟುವ ಸಮಯದಲ್ಲಿ ಮತ್ತೆ ಸಿಡಿದೆದ್ದ ವಧು ತಾಳಿಯ ಸಹಿತ ಹೂವಿನ ಹಾರ ಎಸೆದು ಮದುವೆ ಬೇಡವೆಂದಿದ್ದಾಳೆ. ಈ ವೇಳೆ ದಿಗ್ಬ್ರಮೆಗೊಂಡ ವರನ ಕಡೆಯವರು ಹಾಗೂ ವಧುವಿನ ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದೆ. ಅದಾಗಲೇ ಮಾಹಿತಿ ತಿಳಿದ ವೇಣೂರು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೂ ಮಾತುಕತೆ ನಡೆದಿದ್ದು, ಈ ವೇಳೆ ವರನ ವಿರುದ್ಧ ವಧು ಗಂಭೀರ ಆರೋಪ ಮಾಡಿದ್ದಾಳೆ.
ಈ ಮದುವೆ ಪ್ರಕರಣ ಹಲವು ಆಯಾಮಗಳನ್ನು ಪಡೆದುಕೊಂಡಿದ್ದು, ವಧು ಮದುವೆ ತಿರಸ್ಕರಿಸಲು ಕಾರಣವೇನು ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ.
ಕೆಲ ದಿನಗಳ ಹಿಂದೆಯಷ್ಟೇ ಮದುವೆ ಇಷ್ಟವಿಲ್ಲದ ಯುವತಿ ತಾಳಿ ಕಟ್ಟುವ ವೇಳೆ ಕುಸಿದು ಬಿದ್ದಂತೆ ನಾಟಕವಾಡಿ ಮದುವೆ ನಿರಾಕರಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.