ಹೈಕೋರ್ಟ್ ತೀರ್ಪಿನ ನಂತರವೂ ಹಿಜಾಬ್ ವಿವಾದ ತಣ್ಣಗಾದಂತೆ ಕಾಣುತ್ತಿಲ್ಲ. ಇಂದು ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಕೋರಿದ್ದಾರೆ.
ಇಂದೂ ಕೂಡ ಸುಮಾರು ಹದಿನೈದು ವಿದ್ಯಾರ್ಥಿನಿಯರು ಕಾಲೇಜಿನ ಆದೇಶ ಉಲ್ಲಂಘಿಸಿದ್ದು, ಹಿಜಾಬ್ಗಾಗಿ ಪಟ್ಟು ಹಿಡಿದಿದ್ದಾರೆ.
ಬುರ್ಖಾ ಧರಿಸಿ ಕಾಲೇಜಿಗೆ ಬಂದಿದ್ದ ಹದಿನೈದು ಜನ ವಿದ್ಯಾರ್ಥಿನಿಯರು, ಬಳಿಕ ಹಿಜಾಬ್ ಧರಿಸಿ ಲೈಬ್ರರಿಗೆ ತೆರಳಿದ್ದಾರೆ. ಈ ವೇಳೆ ಕಾಲೇಜು ಸಿಬ್ಬಂದಿ ಹಿಜಾಬ್ ಧರಿಸಿ ಲೈಬ್ರರಿಗೆ ಪ್ರವೇಶಿಸಲು ನಿರ್ಭಂಧಿಸಿದ್ದಾರೆ. ಆದರೆ ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಪಟ್ಟು ಹಿಡಿದಿದ್ದಾರೆ.
ವಿಶ್ವವಿದ್ಯಾನಿಲಯದ ಪ್ರಾಂಶುಪಾಲರು ಕೋರ್ಟ್ನ ತೀರ್ಪನ್ನು ವಿದ್ಯಾರ್ಥಿನಿಯರ ಗಮನಕ್ಕೆ ತಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಯಾವುದೇ ಫಲ ದೊರೆತಿಲ್ಲ.
ಕೆಲ ದಿನಗಳ ಹಿಂದೆಯಷ್ಟೇ ಮುಸ್ಲಿಂ ವಿದ್ಯಾರ್ಥಿನಿಯರು ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಶ್ವವಿದ್ಯಾಲಯದ ಹೊರಗಡೆ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.