ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆಯ ಮೇಲೆ ಆ್ಯಸಿಡ್ ಎರಚಿರುವ ಅಘಾತಕಾರಿ ಘಟನೆ ಇಂದು ಬೆಂಗಳೂರಿನಲ್ಲಿ ವರದಿಯಾಗಿದೆ.
ಸಂತ್ರಸ್ತ 36 ವರ್ಷದ ಮಹಿಳೆ ವಿಚ್ಚೇದಿತಳಾಗಿದ್ದು ಮೂವರು ಮಕ್ಕಳನ್ನು ಹೊಂದಿದ್ದಾಳೆ. ಈಕೆಗೆ ಮದುವೆಯ ಪ್ರಸ್ತಾಪ ಇಟ್ಟಿದ್ದ ಆರೋಪಿ ಅಹ್ಮದ್ (36) ಪ್ರಸ್ತಾಪ ತಿರಸ್ಕಾರವಾದ ಹಿನ್ನೆಲೆಯಲ್ಲಿ ಇಂದು ಆ್ಯಸಿಡ್ ಎರಚಿದ್ದಾನೆ. ಮಹಿಳೆಗೆ ಆ್ಯಸಿಡ್ನಿಂದ ಬಲಗಣ್ಣಿಗೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘ಸಂತ್ರಸ್ತ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಆಕೆಯ ದೃಷ್ಟಿಯನ್ನು ಭಾಗಶಃ ಪುನಃಸ್ಥಾಪಿಸಲಾಗಿದೆ. ಶೀಘ್ರದಲ್ಲೇ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ’ ಎಂದು ಬೆಂಗಳೂರು ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ಹೇಳಿದ್ದಾರೆ.
ಇಬ್ಬರೂ ಸುಮಾರು ಮೂರು ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ಅಗರಬತ್ತಿ ಉತ್ಪನ್ನಗಳನ್ನು ಉತ್ಪಾದಿಸುವ ಕಾರ್ಖಾನೆಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಅನೇಕ ದಿನಗಳಿಂದ ತನ್ನದೇ ಸಮುದಾಯದ ಮಹಿಳೆಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದರು. ಮಹಿಳೆ ನಿರಾಕರಿಸಿದ್ದರಿಂದ ಕೋಪಗೊಂಡ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿ, ಆ್ಯಸಿಡ್ ಎರಚಿದ್ದಾನೆ ಎಂದು ಡಿಸಿಪಿ ಹೇಳಿದರು.
ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಆ್ಯಸಿಡ್ ದಾಳಿ ನಡೆದ ಬೆನ್ನಲ್ಲೇ ಈ ಘಟನೆ ನಡೆದಿದೆ. ಯುವತಿಗೆ ಆಸ್ಯಸಿಡ್ ಎರಚಿ ಪಾರಾರಿಯಾಗಿದ್ದ ಯುವಕ ತಮಿಳುನಾಡಿನ ಆಶ್ರಮವೊಂದರಲ್ಲಿ ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದನು. ರಾಜ್ಯದ ಪೊಲೀಸರು ಆರೋಪಿಯನ್ನು ಹೆಡೆಮುರಿಕಟ್ಟಿ ಕರೆತಂದಿದ್ದರು.