ಬೆಳಗ್ಗಿನ ಜಾವದ ಅಚ್ಚರಿ – ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಪವಾರ್‌, ಶಿವಸೇನೆಗೆ ಶಾಕ್‌..!

Devendra Fadnavis takes oath

ಮಹಾರಾಷ್ಟ್ರ ರಾಜಕೀಯಕ್ಕೆ ಬೆಳಗ್ಗಿನ ಜಾವ ಅಚ್ಚರಿಯ ಹೊಸ ತಿರುವು ಸಿಕ್ಕಿದ್ದು ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನಾವೀಸ್‌ ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ED ತನಿಖೆ ಎದುರಿಸುತ್ತಿರುವ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಉಪ ಮುಖ್ಯಮಂತ್ರಿ ಆಗಿಯೂ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮುಂಬೈನಲ್ಲಿನಲ್ಲಿರುವ ರಾಜಭವನದಲ್ಲಿ ಬೆಳಗ್ಗೆ 8 ಗಂಟೆಗೆ ಅವಸರದ ಮತ್ತು ತುರ್ತು ಸಮಾರಂಭದಲ್ಲಿ ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಇಬ್ಬರಿಗೂ ಪ್ರಮಾಣವಚನ ಬೋಧಿಸಿದರು. ಈ ಮೂಲಕ ಫಲಿತಾಂಶ ಬಂದ ಬಳಿಕ ಒಂದು ತಿಂಗಳ ರಾಜಕೀಯ ಅನಿಶ್ಚತತೆಗೆ ತಾತ್ಕಾಲಿಕ ತೆರೆ ಬಿತ್ತು.

ಎನ್‌ಸಿಪಿ ಇಬ್ಭಾಗ..!

ರಾಷ್ಟ್ರೀಯ ಕಾಂಗ್ರೆಸ್‌ ಪಾರ್ಟಿ ಇಬ್ಭಾಗ ಆಗಿದೆ. ಶರದ್‌ ಪವಾರ್‌ ಹಿರಿಯಣ್ಣನ ಪುತ್ರ ಅಜಿತ್‌ ಪವಾರ್‌ ಜೊತೆಗೆ 35 ಮಂದಿ ಎನ್‌ಸಿಪಿ ಶಾಸಕರು ಗುರುತಿಸಿಕೊಂಡಿದ್ದು, ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿ ಪತ್ರ ಕೊಟ್ಟಿದ್ದಾರೆ.

ಬಹುಮತ ಲೆಕ್ಕಾಚಾರ ಏನು:

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಬಲಾಬಲ 288. ಬಿಜೆಪಿ -105, ಎನ್‌ಸಿಪಿ-54, ಶಿವಸೇನೆ-56, ಕಾಂಗ್ರೆಸ್‌-44 ಶಾಸಕರನ್ನು ಹೊಂದಿದೆ. ಅಗತ್ಯ ಬಹುಮತ 145.

ಬಿಜೆಪಿ ಮೈತ್ರಿಕೂಟ:

ಬಿಜೆಪಿ-105

ಎನ್‌ಸಿಪಿ – 54

ಪಕ್ಷೇತರರು – 9

ಬಿವಿಎ -1

ಆರ್‌ಎಸ್‌ಪಿ -1

ಜೆಎಸ್‌ಎಸ್‌ -1

ಒಟ್ಟು – 173

ವಿರೋಧ ಪಕ್ಷಗಳು:

ಶಿವಸೇನೆ – 56

ಕಾಂಗ್ರೆಸ್‌-44

ಪಕ್ಷೇತರರು -14

ಒಟ್ಟು – 144

ಕಾಂಗ್ರೆಸ್‌-ಶಿವಸೇನೆಗೆ ಆಘಾತ:

ವಿಚಿತ್ರ ಎಂದರೆ ಇವತ್ತು ಎನ್‌ಸಿಪಿ-ಕಾಂಗ್ರೆಸ್‌-ಶಿವಸೇನೆ ನಿಯೋಗ ರಾಜ್ಯಪಾಲರನ್ನು ಭೇಟಿ ಆಗಿ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಬೇಕಿತ್ತು. ಅದಕ್ಕೂ ಮೊದಲು ಇವತ್ತು ಮೂರು ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಭೆ ನಡೆಯಬೇಕಿತ್ತು. ನಿನ್ನೆಯಷ್ಟೇ ಮುಂಬೈನ ನೆಹರು ಕೇಂದ್ರದಲ್ಲಿ ನಡೆದಿದ್ದ ತ್ರಿಪಕ್ಷಗಳ ಸಭೆಯ ಬಳಿಕ ಮಾತಾಡಿದ್ದ ಮುಖ್ಯಸ್ಥ ಶರದ್‌ ಪವಾರ್‌ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಆಗುವುದಕ್ಕೆ ಸಹಮತ ಇದೆ ಎಂದು ಹೇಳಿಕೆ ನೀಡಿದ್ದರು.

Maharastra Chief Minister Devendra Fadnavis family

ನಸುಕಿನ ಜಾವದ ತಿರುವು:

ಅಂದಹಾಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿ ವಿಧಾನಸಭೆ ಅಮಾನತ್ತಿನಲ್ಲಿತ್ತು. ರಾಷ್ಟ್ರಪತಿ ಆಡಳಿತ ತೆರವಾಗದೇ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಆದರೆ ಇವತ್ತು ನಸುಕಿನ ಜಾವ 5.47ಕ್ಕೆ ರಾಷ್ಟ್ರಪತಿ ಆಡಳಿತ ಹಿಂಪಡೆಯುವ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಸಹಿ ಹಾಕಿದರು. ಈ ಮೂಲಕ ಹೊತ್ತು ಮೂಡುತ್ತಿದ್ದಂತೆ ಮಹಾರಾಷ್ಟ್ರ ರಾಜಕೀಯ ಯಾರೂ ಊಹಿಸದ ಮಗ್ಗಲ್ಲಿಗೆ ಬದಲಾಯಿಸಿಕೊಳ್ತು.

ಪ್ರಧಾನಿ ಮೋದಿ-ಶಾ ಶುಭಾಶಯ:

2ನೇ ಬಾರಿಗೆ ದೇವೇಂದ್ರ ಫಡ್ನಾವೀಸ್‌ ಮುಖ್ಯಮಂತ್ರಿಯಾಗಿಯೂ ಅಜಿತ್‌ ಪವಾರ್‌ ಉಪ ಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಶುಭಾಶಯ ತಿಳಿಸಿದರು.

ದೋಸ್ತಿ ವಿರುದ್ಧ ಕಾಂಗ್ರೆಸ್‌ ಆಕ್ರೋಶ:

ಅಧಿಕಾರಕ್ಕಾಗಿ ಕೋಮುವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂಬ ಕಳಂಕಕ್ಕೆ ಈಡಾಗಿರುವ ಕಾಂಗ್ರೆಸ್‌ ಹೊಸ ಬೆಳವಣಿಗೆಗಳಿಂದ ಆಘಾತಕ್ಕೆ ಒಳಗಾಗಿದೆ. ಮಿತ್ರ ಪಕ್ಷ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ನಂಬಿಸಿ ಬೆನ್ನಿಗೆ ಚೂರಿ ಹಾಕಿದ್ದಾರೆ. ನಮಗೆ ಮೊದಲಿನಿಂದಲೂ ಸರ್ಕಾರ ರಚನೆ ಇಷ್ಟವಿರಲಿಲ್ಲ. ಆದರೆ ಪವಾರ್‌ ಅವರೇ ಮುಂದೆ ನಿಂತು ಸರ್ಕಾರ ರಚನೆಯ ಮಾತುಕತೆ ನಡೆಸಿ ಈಗ ದ್ರೋಹ ಬಗೆದಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಶಿವಸೇನೆಯ ಕಥೆ ಏನು..?

ಹಾಗಾದರೆ ಶಿವಸೇನೆ ಕಥೆ ಏನು..? ಶಿವಸೇನೆಯ ಸುಮಾರು 25 ಮಂದಿ ಶಾಸಕರು ಬಿಜೆಪಿ ಜೊತೆಯೇ ಹೋಗುವುದಕ್ಕೆ ಸಿದ್ಧರಾಗಿದ್ದರು. ಆದರೆ ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದ ಶಿವಸೇನೆ ಹಳೆಯ ದೋಸ್ತಿ ಜೊತೆ ಮುಂದುವರಿಯಲು ಸಿದ್ಧರಿಲಿಲ್ಲ. ಪ್ರಧಾನಿ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಅರವಿಂದ್‌ ಸಾವಂತ್‌ ಕೂಡಾ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಎನ್‌ಸಿಪಿ-ಕಾಂಗ್ರೆಸ್‌-ಶಿವಸೇನೆ ಮೈತ್ರಿಕೂಟದ ಸಾಧ್ಯತೆಯನ್ನು ಹೆಚ್ಚಿಸಿದ್ದರು.

LEAVE A REPLY

Please enter your comment!
Please enter your name here