ಮಹಾರಾಷ್ಟ್ರದಲ್ಲಿ ಕರ್ನಾಟಕದ್ದೇ ತಂತ್ರ – ಆ ನಾಲ್ವರು ಯಾರು..?

Devendra Fadnavis and Ajit Pawar

ಅವಸರದಲ್ಲಿ ಹುಟ್ಟಿಕೊಂಡ ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್‌ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಒಂದು ದಿನದ ಮಟ್ಟಿಗೆ ಜೀವದಾನ ಕೊಟ್ಟ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಕರ್ನಾಟಕದಲ್ಲಿ ಅನುಸರಿಸಿದ್ದ ನೀತಿಯನ್ನೇ ಬಿಜೆಪಿ ಅನುಸರಿಸುತ್ತಿದ್ದು ಆಪರೇನ್‌ ಕಮಲಕ್ಕಾಗಿ ನಾಲ್ಕು ತಂಡಗಳನ್ನು ರಚಿಸಿದೆ. ಈ ಮೂಲಕ ಹುಳಿ ದ್ರಾಕ್ಷಿಯಂತೆ ಕೈಗೆಟುಕದಿರುವ ಅಧಿಕಾರವನ್ನು ಹಿಡಿಯಲು ಹಣ ಮತ್ತು ಆಮಿಷದ ಹಾಡಿ ಹಿಡಿದಿದೆ ಎಂಬ ಮಾಹಿತಿಗಳು ಬರುತ್ತಿವೆ.

‌ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆಯ ಶಾಸಕರನ್ನು ಸೆಳೆಯಲೆಂದೇ ನಾಲ್ಕು ಪ್ರಮುಖರ ತಂಡವೊಂದು ಬಿಜೆಪಿ ರಚಿಸಿದೆ ಎನ್ನಲಾಗಿದ್ದು ಅದರಲ್ಲಿ ವಿಧಾನಸಭಾ ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಿದ್ದ ರಾಧಾಕೃಷ್ಣ ವೀಕೆ ಪಾಟೀಲ್‌, ನಾರಾಯಣ ರಾಣೆ, ಗಣೇಶ್‌ ನಾಯ್ಕ್‌ ಮತ್ತು ಬಬನ್‌ರಾವ್‌ ಪಚುಪುಟೆ ಇದ್ದಾರೆ.

ಆಮಿಷಗಳೇನು ಗೊತ್ತಾ..?

ಮೂಲಗಳ ಪ್ರಕಾರ ಮೂರು ಪಕ್ಷಗಳ ಶಾಸಕರಿಗೆ ಬಿಜೆಪಿ ನಾಲ್ಕು ಆಮಿಷಗಳನ್ನು ಇಟ್ಟಿದೆ.

೧) ೮೦ ರಿಂದ ೧೦೦ ಕೋಟಿ ರೂಪಾಯಿ ಹಣದ ಆಮಿಷ

೨) ಬಿಜೆಪಿ ಸೇರಿಕೊಂಡರೆ ಸಚಿವ ಸ್ಥಾನದ ಭರವಸೆ

೩) ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ

೪) ಪ್ರಮುಖ ಯೋಜನೆಗಳ ಮಂಜೂರು

ಶಾಸಕರನ್ನು ಕಾಯುವ ಕಾಯಕ..!

ಇತ್ತ ಮಹಾರಾಷ್ಟ್ರದಲ್ಲಿನ ಮಧ್ಯರಾತ್ರಿಯ ದುಸ್ಸಾಹಸದ ಬಳಿಕ ಮೂರು ಪಕ್ಷಗಳಿಗೂ ತಮ್ಮ ಶಾಸಕರನ್ನು ಕಾಯುವುದೇ ದೊಡ್ಡ ಕೆಲಸವಾಗಿದೆ. ಮುಂಬೈನ ಲಲಿತ ಹೋಟೆಲ್‌ನಲ್ಲಿರುವ ಶಿವಸೇನೆ ಶಾಸಕರ ಹೊಣೆಗಾರಿಕೆಯನ್ನು ಸುಭಾಷ್‌ ದೇಸಾಯಿ ಮತ್ತು ಮಿಲಿಂದ್‌ ನರ್ವೆಕರ್‌ಗೆ, ಜೆ ಡಬ್ಲ್ಯೂ ಮ್ಯಾರಿಯಟ್‌ ಹೋಟೆಲ್‌ನಲ್ಲಿರುವ ಕಾಂಗ್ರೆಸ್‌ ಶಾಸಕರ ಜವಾಬ್ದಾರಿಯನ್ನು ಅಶೋಕ್‌ ಚವ್ಹಾಣ್‌ ಮತ್ತು ಪೃಥ್ವಿರಾಜ್‌ ಚವ್ಹಾಣ್‌ಗೆ ಹಾಗೂ ರೆನೈಸೆನ್ಸ್‌ ಹೋಟೆಲ್‌ನಲ್ಲಿರುವ ಶಿವಸೇನೆ ಶಾಸಕರ ಜವಾಬ್ದಾರಿಯನ್ನು ಜಿತೇಂದ್ರ ಅವ್ಹಾದ್‌ ಮತ್ತು ನವಾಬ್‌ ಮಲಿಕ್‌ಗೆ ನೀಡಲಾಗಿದೆ.

ದಾಯಾದಿ ಮಗನ ಆಟ..!

ಇವೆಲ್ಲದರ ಮಧ್ಯೆ ಅಜಿತ್‌ ಪವಾರ್‌ ಮೂಲಕ ಬಿಜೆಪಿ ಎನ್‌ಸಿಪಿ ಶಾಸಕರ ಜೊತೆಗೆ ತಂತ್ರಗಾರಿಕೆ ಹೆಣೆಯುತ್ತಿದೆ. ನಿನ್ನೆ ಅಚ್ಚರಿಯ ಪ್ರಮಾಣವಚನದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಅಜಿತ್‌ ಪವಾರ್‌ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ ಅಮಿತ್‌ ಶಾಗೆ ಧನ್ಯವಾದ ಹೇಳಿದ್ದಾರೆ.

ಅಲ್ಲದೇ ಬಿಜೆಪಿ ಜೊತೆಗೆ ಸೇರಿ ಎನ್‌ಸಿಪಿ ಸರ್ಕಾರ ರಚಿಸಲಿದ್ದು ಐದು ವರ್ಷ ಮಹಾರಾಷ್ಟ್ರದಲ್ಲಿ ಸುಭದ್ರ ಅಧಿಕಾರ ನೀಡುವುದಾಗಿ ಟ್ವೀಟಿಸಿದ್ದಾರೆ. ತಾವಿನ್ನೂ ಎನ್‌ಸಿಪಿಯಲ್ಲೇ ಇದ್ದು ಶರದ್‌ ಪವಾರ್‌ ನಮ್ಮ ನಾಯಕ ಎನ್ನುವುದರ ಜೊತೆಗೆ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಉಪಮುಖ್ಯಮಂತ್ರಿ ಎಂಬ ಪದನಾಮವನ್ನೂ ಹಾಕಿದ್ದಾರೆ.

ಚಿಕ್ಕಪ್ಪನ ತಿರುಗೇಟು..!

ಇದಾದ ಕೆಲವೇ ಕ್ಷಣಗಳಲ್ಲಿ ತಿರುಗೇಟು ಕೊಟ್ಟಿರುವ ಚಿಕ್ಕಪ್ಪ ಶರದ್‌ ಪವಾರ್‌ ಅಜಿತ್‌ ಪವಾರ್‌ ಹೇಳುತ್ತಿರುವುದೆಲ್ಲ ಸುಳ್ಳು. ನಾವು ಬಿಜೆಪಿಗೆ ಬೆಂಬಲ ಕೊಡಲ್ಲ. ಕಾಂಗ್ರೆಸ್‌, ಶಿವಸೇನೆಯ ಜೊತೆ ಸೇರಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

LEAVE A REPLY

Please enter your comment!
Please enter your name here