3 ತಿಂಗಳ ಹಿಂದೆಯಷ್ಟೇ ಗೆದ್ದಿದ್ದ ಏಕೈಕ ಕಾಂಗ್ರೆಸ್​ ಶಾಸಕ TMCಗೆ ಸೇರ್ಪಡೆ

ಮೂರು ತಿಂಗಳ ಹಿಂದೆಯಷ್ಟೇ ಗೆದ್ದಿದ್ದ ಪಶ್ಚಿಮ ಬಂಗಾಳದ (West Bengal Congress) ಏಕೈಕ ಕಾಂಗ್ರೆಸ್​ ಶಾಸಕ ಆಡಳಿತರೂಢ ತೃಣಮೂಲ ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದಾರೆ.
ಸಾಗರ್​ದಿಘಿ (Sagardighi Assembly) ವಿಧಾನಸಭಾ ಕ್ಷೇತ್ರದ ಶಾಸಕ, ಉದ್ಯಮಿ ಬೆರಾನ್​ ​ ಬಿಸ್ವಾಸ್ (Bayron Biswas)​ ಅವರು ಇವತ್ತು ತೃಣಮೂಲ ಕಾಂಗ್ರೆಸ್​ಗೆ (TMC) ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಧಾನಸಭೆಯಲ್ಲಿ ಮತ್ತೆ ಕಾಂಗ್ರೆಸ್​ನ ಒಬ್ಬರೇ ಒಬ್ಬ ಶಾಸಕರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ತೃಣಮೂಲ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಅವರ ಸಂಬಂಧಿಯೂ ಆಗಿರುವ ಲೋಕಸಭಾ ಸಂಸದ ಅಭಿಷೇಕ್​ ಬ್ಯಾನರ್ಜಿ ಅವರು ಬೈರೂನ್​ ಬಿಸ್ವಾಸ್​ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಅಭಿಷೇಕ್​ ಬ್ಯಾನರ್ಜಿ (Abhishek Banerjee) ನೇತೃತ್ವದಲ್ಲಿ ಸಾಗುತ್ತಿರುವ ಜನಸಹೋಯಗಯಾತ್ರೆ ವೇಳೆ ಪಕ್ಷಕ್ಕೆ ಸೇರ್ಪಡೆಯಾದರು.
ಇದೇ ವರ್ಷ ಮಾರ್ಚ್​ 2ರಂದು ಪ್ರಕಟವಾಗಿದ್ದ ವಿಧಾನಸಭಾ ಉಪ ಚುನಾವಣೆ ಫಲಿತಾಂಶದಲ್ಲಿ ಮುರ್ಷಿದಾಬಾದ್​ ಜಿಲ್ಲೆಯ ಸಾಗರ್​ದಿಘಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಎಡಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಬೈರೂನ್​ ಬಿಸ್ವಾಸ್​ 22,986 ಮತಗಳಿಂದ ಟಿಎಂಸಿ ಅಭ್ಯರ್ಥಿ ದೇಬಾಸಿಶ್​ ಬ್ಯಾನರ್ಜಿ ಅವರನ್ನು ಸೋಲಿಸಿದ್ದರು.
50 ವರ್ಷಗಳ ಬಳಿಕ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಈ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಈ ಉಪ ಚುನಾವಣಾ ಫಲಿತಾಂಶ ಪಶ್ಚಿಮ ಬಂಗಾಳದಲ್ಲಿ ಬದಲಾಗುತ್ತಿರುವ ರಾಜಕೀಯ ಚಿತ್ರಣದ ಸುಳಿವು ಎಂದೇ ಭಾವಿಸಲಾಗಿತ್ತು.
ಮಮತಾ ಬ್ಯಾನರ್ಜಿ ಅವರ ತಂತ್ರಗಾರಿಕೆ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ವಿರುದ್ಧವಾಗಿ ಲೋಕಸಭಾ ಚುನಾವಣೆಯಲ್ಲಿ ಒಕ್ಕೂಟ ರಚಿಸಿಕೊಳ್ಳುವ ವಿಪಕ್ಷಗಳ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ.