ಕರ್ನಾಟಕದಲ್ಲಿ ಲೋಕಸಭಾ ಲೆಕ್ಕಾಚಾರ: BJP-JDS ಮೈತ್ರಿಯ ಲಾಭ ಯಾರಿಗೆ..?

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಾಯಕತ್ವದ ಜೆಡಿಎಸ್​ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಲೋಕಸಭಾ ಚುನಾವಣಾ ಮೈತ್ರಿಯಿಂದ ಕರ್ನಾಟಕದಲ್ಲಿ ರಾಜಕೀಯ ಚಿತ್ರಣ ಎಷ್ಟರ ಮಟ್ಟಿಗೆ ಬದಲಾಗಬಹುದು..? ಹೀನಾಯವಾಗಿ ಸೋತಿರುವ ಬಿಜೆಪಿ ಮತ್ತು ಜೆಡಿಎಸ್​ ಜೊತೆಗೂಡಿ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಮರು ಜೀವ ಪಡೆಯುವ ಪ್ರಯತ್ನಕ್ಕೆ ಕರ್ನಾಟಕದಲ್ಲಿ ಅಡ್ಡಿ ಆಗಲಿವೆಯಾ..?

2014 ಮತ್ತು 2019ರ ಲೋಕಸಭಾ ಚುನಾವಣಾ ಅಂಕಿಅಂಶ:

2014

ಗೆಲುವು

ಶೇ. ಮತ

ಕಾಂಗ್ರೆಸ್​

09 (+3)

40

ಬಿಜೆಪಿ

17 (-2)

43

ಜೆಡಿಎಸ್​

2 (-1)

11

2019

ಕಾಂಗ್ರೆಸ್​

01 (-8)

32.11(-7.89)

ಬಿಜೆಪಿ

25(+8)

51.75(+8.75)

ಜೆಡಿಎಸ್​

1(-1)

9.71(-1.29)

2014 ಮತ್ತು 2019ಕ್ಕೆ ಭಿನ್ನವಾದ ಪರಿಸ್ಥಿತಿಗಳು:

2014ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಿತ್ತು.  ದೇಶಾದ್ಯಂತ ನರೇಂದ್ರ ಮೋದಿ ಅಲೆ ಇದ್ದಾಗ್ಯೂ ಕರ್ನಾಟಕದಲ್ಲಿ ಬಿಜೆಪಿ 2 ಲೋಕಸಭಾ ಸ್ಥಾನಗಳನ್ನು ಕಳೆದುಕೊಂಡಿತ್ತು. 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿತ್ತು ಮತ್ತು ಕಾಂಗ್ರೆಸ್​ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 6ರಿಂದ 9ಕ್ಕೆ ಹೆಚ್ಚಿಸಿಕೊಂಡಿತ್ತು.

2019ರ ಲೋಕಸಭಾ ಚುನಾವಣೆ:

ಈ ಚುನಾವಣೆ ವೇಳೆಗೆ ಕರ್ನಾಟಕದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರ ಇತ್ತು. ಎರಡೂ ಪಕ್ಷಗಳು ಲೋಕಸಭಾ ಚುನಾವಣಾ ಮೈತ್ರಿ ಮಾಡಿಕೊಂಡವು. ಆದರೆ ಮೈತ್ರಿಯಿಂದ ಕಾಂಗ್ರೆಸ್​ಗೆ ಕವಡೆ ಕಾಸಿನ ಲಾಭ ಆಗಲಿಲ್ಲ, ದೊಡ್ಡ ನಷ್ಟ ಅನುಭವಿಸಿತು, ಜೆಡಿಎಸ್​​ಗೆ ನಷ್ಟವೇನೂ ಆಗಲಿಲ್ಲ, ಆದರೆ ಬಿಜೆಪಿ ದೊಡ್ಡ ಲಾಭವನ್ನೇ ಪಡೆಯಿತು.

ಪುಲ್ವಾಮಾ ದಾಳಿಯಿಂದ ಪ್ರಧಾನಿ ಮೋದಿ ಸರ್ಕಾರದ ಪರವಾಗಿ ಎದ್ದ ಎರಡನೇ ಅಲೆ, ವಿಧಾನಸಭೆಯಲ್ಲಿ ಬಿಜೆಪಿ ಸ್ಥಾನ ಹೆಚ್ಚಿಸಿಕೊಂಡಿದ್ದು, ಸಮ್ಮಿಶ್ರ ಸರ್ಕಾರ ಪರ ಒಲವು ಕಳೆದುಕೊಂಡ ಜನ ಮತ್ತು ದೇವೇಗೌಡರ ಕುಟುಂಬದ ಅತಿಯಾದ ಕುಟುಂಬ ರಾಜಕಾರಣ, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಇದ್ದ ದಲಿತ ಮತಗಳು ಲೋಕಸಭಾ ಚುನಾವಣೆವರೆಗೂ ಅದರ ಜೊತೆಗೆ ಉಳಿದುಕೊಂಡಿದ್ದು ಮತ್ತು ಲೋಕಸಭಾ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂಬ ನಂಬಿಕೆ ಕಾರಣದಿಂದ ಡಬಲ್​ ಇಂಜಿನ್​​ಗೆ ಜನ ಒಲವು ತೋರಿದ್ದು ಬಿಜೆಪಿ 25 ಸ್ಥಾನ ಗೆಲ್ಲಲು ಕಾರಣವಾಯಿತು.

2019ರಲ್ಲಿ ಕಾಂಗ್ರೆಸ್​ ಅತ್ಯಂತ ಕಡಿಮೆ ಅಂತರದಿಂದ ಸೋತಿರುವ ಕ್ಷೇತ್ರಗಳು: 

ಲೋಕಸಭಾ ಕ್ಷೇತ್ರ

ಸಂಸದ

ಅಂತರ

ಬೆಂಗಳೂರು ಕೇಂದ್ರ

ಪಿ ಸಿ ಮೋಹನ್​

70,968

ಚಾಮರಾಜನಗರ

ವಿ ಶ್ರೀನಿವಾಸ್​ಪ್ರಸಾದ್​

1,817

ತುಮಕೂರು

ಜಿ ಎಸ್​ ಬಸವರಾಜು

13,339

ಚಿತ್ರದುರ್ಗ

ಎ ನಾರಾಯಣಸ್ವಾಮಿ

80,178

ಬಳ್ಳಾರಿ

ವೈ ದೇವೇಂದ್ರಪ್ಪ

55,707

ಕೊಪ್ಪಳ

ಕರಡಿ ಸಂಗಣ್ಣ

38,397

ಕಲಬುರಗಿ

ಉಮೇಶ್​ ಜಾಧವ್​

95,452

2024ಕ್ಕೂ ಮತ್ತೆ ಚಿತ್ರಣ ಬದಲು..?

ಕರ್ನಾಟಕದಲ್ಲಿ ಈಗ ಮತ್ತೆ ಚಿತ್ರಣ ಬದಲಾಗಿದೆ. 24 ವರ್ಷಗಳ ಹಿಂದಿನ ದಾಖಲೆ ಮುರಿದು ಕಾಂಗ್ರೆಸ್​ 135 ಸೀಟುಗಳನ್ನು ಗೆದ್ದಿದೆ. ಬಿಜೆಪಿ 65 ಮತ್ತು ಜೆಡಿಎಸ್​ಗೆ 19 ಸೀಟುಗಳಷ್ಟೇ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ತೇಲಾಡುತ್ತಿದ್ದ ಬಿಜೆಪಿಯವರಿಗೆ ಅಂತಹ ಅಲೆ ಎನ್ನುವುದು ಕರ್ನಾಟಕದ ಜನ ಅರ್ಥ ಆಗುವಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ವಿಧಾನಸಭಾ ಚುನಾವಣಾ ಫಲಿತಾಂಶ ಮಾತ್ರವಲ್ಲದೇ ಬಿಜೆಪಿ ಮತ್ತು ಜೆಡಿಎಸ್​​ ಮೈತ್ರಿ ಕೂಡಾ ಲೋಕಸಭಾ ಲೆಕ್ಕಾಚಾರ ಬದಲಿಸಬಹುದು. ಚುನಾವಣೋತ್ತರ ಜಾತಿವಾರು ಮತ ಲೆಕ್ಕಾಚಾರದ ಪ್ರಕಾರ ಲಿಂಗಾಯತ ಮತಗಳು ಬಿಜೆಪಿಯಿಂದ ದೂರವಾಗಿಲ್ಲ. ಡಿಕೆಶಿವಕುಮಾರ್​ ಕಾರಣದಿಂದ ಒಕ್ಕಲಿಗ ಮತಗಳು ಕಾಂಗ್ರೆಸ್​​ಗೆ ಹೆಚ್ಚಳವಾಗಿವೆ ಎನ್ನುವುದು ಸುಳ್ಳು. ಒಕ್ಕಲಿಗ ಮತಗಳ ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿ ಜೆಡಿಎಸ್​ ಮತ್ತು ನಂತರದಲ್ಲಿ ಬಿಜೆಪಿಯಿದೆ. ಅಹಿಂದ ಮತ ಕ್ರೋಢೀಕರಣದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಚಂಡ​ ಗೆಲುವು ಸಾಧ್ಯವಾಗಿದೆ. 

ಸಾಧ್ಯತೆಗಳು:

1. ವಿಧಾನಸಭೆಯಲ್ಲಿ ಕಾಂಗ್ರೆಸ್​ 135 ಸೀಟುಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್​​ಗೆ ಲೋಕಸಭೆಯಲ್ಲಿ ಹೆಚ್ಚಿನ ಬಲ ಸಿಗಲಿದೆ.

2. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಎದ್ದಿರುವ ಆಡಳಿತ ವಿರೋಧಿ ಅಲೆಯ ಮತಗಳು ಕಾಂಗ್ರೆಸ್​​ ಮತಪೆಟ್ಟಿಗೆಗೆ ಸೇರಿಕೊಳ್ಳಬಹುದು.

3. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲಕ್ಕಿದ್ದ ದಲಿತ ಮತ್ತು ಹಿಂದುಳಿದ ಮತಗಳು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್​ ಕೈ ಹಿಡಿಯಬಹುದು.

4. ಒಂದು ವೇಳೆ ಬಿಜೆಪಿ ಜೊತೆಗೆ ಜೆಡಿಎಸ್​ ಹೋದರೆ ಆಗ ಮುಸಲ್ಮಾನ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್​​ ಕಡೆಯೇ ಗಟ್ಟಿಯಾಗಬಹುದು. 

5. ಜೆಡಿಎಸ್​ನ್ನು ಬೆಂಬಲಿಸುತ್ತಿದ್ದ ಆದರೆ ಬಿಜೆಪಿಯನ್ನು ವಿರೋಧಿಸುತ್ತಿದ್ದ ಜೆಡಿಎಸ್​ ಮತಗಳು ಕಾಂಗ್ರೆಸ್​​ಗೆ ವರ್ಗ ಆಗಬಹುದು.

6. 2019ರಲ್ಲಿ ಇದ್ದಂತೆ ಈ ಬಾರಿ ಡಬಲ್​ ಇಂಜಿನ್​​ ಘೋಷಣೆಯನ್ನು ಲೋಕಸಭಾ ಚುನಾವಣೆಗೆ ಬಳಸಿಕೊಳ್ಳಲು ಅವಕಾಶ ಇಲ್ಲ.

7. ಅನ್ನಭಾಗ್ಯ ಒಳಗೊಂಡಂತೆ ಕರ್ನಾಟಕ ಸರ್ಕಾರದ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಸರ್ಕಾರದ ಅಡ್ಡಿ ಬಿಜೆಪಿಗೆ ದುಬಾರಿಯಾಗಬಹುದು.

8. ಭಾರತ್​ ಜೋಡೋ ಯಾತ್ರೆ ಬಳಿಕ ದಕ್ಷಿಣ ಭಾರತದಲ್ಲಿ ರಾಹುಲ್​ ಗಾಂಧಿ ಅವರ ಜನಪ್ರಿಯತೆಯ ಏರಿಕೆ ಕಾಂಗ್ರೆಸ್​​ಗೆ ಲಾಭ ಮಾಡಿಕೊಡಬಹುದು.

9. ರಾಜಸ್ಥಾನ, ಛತ್ತೀಸ್​ಗಢ, ಮಧ್ಯಪ್ರದೇಶ, ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಬಿಜೆಪಿಗೆ ವ್ಯತಿರಿಕ್ತವಾಗಿ ಬಂದರೆ ಅದು ಬಿಜೆಪಿಯ ಲೋಕಸಭಾ ಲೆಕ್ಕಾಚಾರವನ್ನು ಬುಡಮೇಲು ಮಾಡಬಹುದು.