12 ಜಿಲ್ಲೆಗಳಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಳಿ – ಅಧಿಕಾರಿಗಳಿಗೆ ನಡುಕ

ಲೋಕಾಯುಕ್ತ ಪೊಲೀಸರು ಇವತ್ತು ಐದು ಜಿಲ್ಲೆಗಳಲ್ಲಿ ದಾಳಿ ನಡೆಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ.  ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್​ ಮತ್ತು ಬೀಳಗಿಯ ಸಹಾಯಕ ನಿರ್ದೇಶಕ ಕೃಷ್ಣಾ ಶಿರೂರ ಮನೆ ಮತ್ತು ಕಚೇರಿಗಳಲ್ಲಿ ಶೋಧ ಕೈಗೊಂಡಿದ್ದಾರೆ. ಲೋಕಾಯುಕ್ತ ಡಿವೈಎಸ್​ಪಿ ಶಂಕರರಾಗಿ ಮತ್ತು ಪುಷ್ಪಲತಾ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

ವಿಜಯಪುರ ಜಿಲ್ಲೆಯಲ್ಲಿ ನಾಲ್ಕು ಕಡೆ ಲೋಕಾಯುಕ್ತ ಪೊಲೀಸರು ಶೋಧ ಕೈಗೊಂಡಿದ್ದಾರೆ. ಬಸವನಬಾಗೇವಾಡಿಯಲ್ಲಿ ಪಿಡಬ್ಲ್ಯೂಡಿ ಪ್ರಭಾರಿ ಎಇಇ  ಭೀಮನಗೌಡ ಬಿರಾದಾರ್​, ಅವರ ಸಂಬಂಧಿ ಶ್ರೀಕಾಂತ್​ ಅಂಗಡಿ,  ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಜೆ ಪಿ ಶೆಟ್ಟಿ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಎಸ್​ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಆರ್ ಪುರಂ ತಹಶಿಲ್ದಾರ್ ಅಜಿತ್​ ರೈ ಮನೆ ಮತ್ತು ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಅಜಿತ್​ ರೈಗೆ ಸೇರಿದ 10 ಕಡೆಗಳಲ್ಲಿ ಶೋಧ ನಡೆಸಲಾಗಿದೆ.

ನಗರ ಮತ್ತು ಗ್ರಾಮೀಣ ಘಟಕದ ಸಹಾಯಕ ನಿರ್ದೇಶಕ ಶರಣಪ್ಪ ಮಡಿವಾಳ ಅವರ  ಕಲಬುರಗಿ ತಾಲೂಕಿನ ಖಣದಾಳ ಬಳಿಯಿರೋ ಪಾರ್ಮ್ ಹೌಸ್ ಮೇಲೆ ದಾಳಿ ನಡೆದಿದೆ. ರಾಯಚೂರು ಜಿಲ್ಲೆಯ ಸಿಂಧನೂರಲ್ಲಿರುವ ಕಚೇರಿ ಮತ್ತು ಬಾಡಿಗೆ ಮನೆ ಮೇಲೆ ದಾಳಿ ನಡೆದಿದೆ.

ರಾಯಚೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎಇಇ ವಿಶ್ವನಾಥರೆಡ್ಡಿ ಅವರ ಯಾದಗಿರಿಯ ಗ್ರೀನ್‌ ಸಿಟಿಯಲ್ಲಿರುವ ವಿಶ್ವನಾಥರೆಡ್ಡಿ ಅವರ ಬೃಹತ್ ಬಂಗಲೆಯಲ್ಲಿ ಶೋಧ ಕೈಗೊಳ್ಳಲಾಗಿದೆ.

ತುಮಕೂರಲ್ಲಿರುವ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ ಹೆಚ್​ ರವಿ ಮನೆ ಮತ್ತು ರಾಮನಗರದ ಶಾಂತಿಲಾಲ್​ ಲೇಔಟ್​ನಲ್ಲಿರುವ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಹಾಸನದಿಂದ ತುಮಕೂರಿಗೆ ರವಿ ವರ್ಗಾವಣೆಯಾಗಿದ್ದರು.

ಗೌರಿಬಿದನೂರು ಅಬಕಾರಿ‌ ನಿರೀಕ್ಷಕ ರಮೇಶ್ ಅವರ ಬೆಂಗಳೂರಿನ ನಾಗರಬಾವಿಯಲ್ಲಿರುವ ಮನೆ ಮತ್ತು ಕಚೇರಿ ಮೇಲೆ ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ ಪಿ ಪವನ್ ನೆಜ್ಜೂರು ನೇತೃತ್ವದಲ್ಲಿ ದಾಳಿ ನಡೆದಿದೆ.

ಸೇನಾ ಭೂ ನಿಗಮದ ಎಇ  ಕೋದಂಡರಾಮಯ್ಯ ಅವರ ಕೋಲಾರ ನಗರದ ಕುವೆಂಪು ನಗರದಲ್ಲಿರುವ ಮನೆ ಮೇಲೆ ದಾಳಿ ನಡೆದಿದೆ. ಮನೆ, ಕಾಂಪ್ಲೆಕ್ಸ್, ಶ್ರೀನಿವಾಸಪುರ ತಾಲೂಕಿನ ಲಕ್ಷ್ಮಿಸಾಗರದಲ್ಲಿರುವ ಮನೆ, ತುಮಕೂರಿನ ಕಚೇರಿ ಮೇಲೆ ದಾಳಿ ನಡೆದಿದೆ.

ಚಿಕ್ಕಮಗಳೂರಲ್ಲಿ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರಾದ ಗಂಗಾಧರ್ ಮನೆ, ರಾಮನಹಳ್ಳಿಯಲ್ಲಿರುವ ಪೆಟ್ರೋಲ್​ ಬಂಕ್​ ಮತ್ತು ನಿರ್ಮಾಣ ಹಂತದಲ್ಲಿರುವ ರೆಸಾರ್ಟ್​ ಮೇಲೆ ದಾಳಿ ನಡೆದಿದೆ.