ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ಕಾರಣರಾದ ಮಾಜಿ ಕೇಂದ್ರ ಸಚಿವ ದಿವಂಗತ ಅನಂತಕುಮಾರ್ ಅವರ ಹೆಸರಿಡುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ (V Somanna) ಹೇಳಿದ್ದಾರೆ.
ಬಿಜೆಪಿಯ ಎಚ್.ಎಸ್.ಗೋಪಿನಾಥ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಯೋಜನೆ ಅನಂತಕುಮಾರ್ ಅವರ ಕನಸಿನ ಕೂಸು, ವಾಜಪೇಯಿ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಯೋಜನೆ ಬೆಂಗಳೂರಿಗೆ ತರುವ ಪ್ರಕ್ರಿಯೆ ಆರಂಭಿಸಿದರು. ಹೀಗಾಗಿ ಯೋಜನೆಗೆ ಅವರ ಹೆಸರಿಡಬೇಕು ಎಂಬ ಬೇಡಿಕೆಯಿದೆ. ಆದರೆ, ಇದು ಕೇಂದ್ರದ ಯೋಜನೆ ಆಗಿರುವುದರಿಂದ ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗುತ್ತದೆ, ರೈಲ್ವೆ ಇಲಾಖೆ ಸಹ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಯೋಜನೆಯನ್ನು ನಾಲ್ಕು ಕಾರಿಡಾರ್ಗಳಲ್ಲಿ ಜಾರಿ ತರಲಾಗುವುದು. ಒಟ್ಟು 148.7 ಕಿ.ಮೀ. ಉದ್ದದ ರೈಲು ಮಾರ್ಗ ಇದಾಗಿದೆ. ಸದ್ಯ ಎರಡನೇ ಕಾರಿಡಾರ್ ಆಗಿರುವ ಬೈಯಪ್ಪನಹಳ್ಳಿ-ಚಿಕ್ಕಬಾಣಾವರದ 25 ಕಿ.ಮೀ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಈಗಾಗಲೇ ಶೇ.85ರಷ್ಟುಭೂಸ್ವಾಧೀನವಾಗಿದೆ. ಬಾಕಿ ಇರುವ 6 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 12 ರೈಲ್ವೆ ನಿಲ್ದಾಣ ಬರಲಿದೆ. ಒಟ್ಟು 8 ಕಿ.ಮೀ. ಎತ್ತರದ ಸೇತುವೆ ಹಾಗೂ 17.5 ಕಿ.ಮೀ. ನೆಲಮಾರ್ಗದಲ್ಲಿ ರೈಲ್ವೆ ಮಾರ್ಗ ಬರಲಿದೆ. 869 ಕೋಟಿ ವೆಚ್ಚದಲ್ಲಿ 27 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ವಿ.ಸೋಮಣ್ಣ (V Somanna) ಉತ್ತರಿಸಿದ್ದಾರೆ. ಇದನ್ನೂ ಓದಿ : ಬೆಂಗಳೂರು ಕೆರೆ ಒತ್ತುವರಿ ತನಿಖೆಗೆ ಆಯೋಗ : ಸಿಎಂ ಬೊಮ್ಮಾಯಿ ಘೋಷಣೆ