ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ(Landslide) ಉಂಟಾಗಿದ್ದು, ಮೂವರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಶನಿವಾರ ಮುಂಜಾನೆ 4.30ರ ವೇಳೆಗೆ ಚೋವರಿ ತಹಸಿಲ್ನ ಬನೆತ್ ಗ್ರಾಮದಲ್ಲಿ ಭೂಕುಸಿತ(Landslide) ದಿಂದಾಗಿ ಮನೆ ಉರುಳಿ ಬಿದ್ದಿದೆ ಎಂದು ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರದ (ಡಿಇಒಸಿ) ಅಧಿಕಾರಿಗಳು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ದಿಢೀರ್ ಪ್ರವಾಹದಿಂದಾಗಿ ಮನೆಗಳಿಗೆ ನೀರು ನುಗ್ಗಿದೆ. ಹಲವಾರು ಗ್ರಾಮಸ್ಥರು ಮನೆಗಳಲ್ಲಿ ಸಿಲುಕಿಕೊಂಡಿದ್ದು, ವಾಹನಗಳು ಹಾನಿಗೊಳಗಾಗಿವೆ. ಮಂಡಿ ಜಿಲ್ಲೆಯ ಬಲ್ಹಾ, ಸದರ್, ಥೂನಾಗ್, ಲಮಾಥಾಚ್ನ ಹಲವಾರು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳು ಹಾನಿಗೀಡಾಗಿವೆ.
ಇದನ್ನೂ ಓದಿ : ದಕ್ಷಿಣ ಕನ್ನಡ : ಮನೆ ಮೇಲೆ ಭೂಕುಸಿತ – ಮೂರು ಜನ ಸಾವು
ರಾಜ್ಯದಲ್ಲಿ ಆಗಸ್ಟ್ 25ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಭೂಕುಸಿತ(Landslide) ವಾಗುವ ಭೀತಿಯಿದೆ ಎಂದು ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ಎಚ್ಚರಿಕೆ ನೀಡಿದೆ.
ಭೂಕುಸಿತ, ದಿಢೀರ್ ಪ್ರವಾಹ, ಮೇಘಸ್ಫೋಟ, ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಸಾಧ್ಯತೆಯ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಡಿಇಒಸಿಗಳಿಗೆ ಹಿಮಾಚಲ ಪ್ರದೇಶದ ವಿಪತ್ತು ನಿರ್ವಹಣಾ ಇಲಾಖೆಯು ಸೂಚಿಸಿದೆ ಎಂದು ತಿಳಿದುಬಂದಿದೆ.