ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕವೂ KSRTC ಬಸ್​ಗಳಲ್ಲಿ ಹಿಂದಿ ಹೇರಿಕೆ – ಹಿಂದಿ ರಾಷ್ಟ್ರಭಾಷೆ ಎಂದು KSRTCಯಿಂದ ತಪ್ಪು ಮಾಹಿತಿ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭವಾಗಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್​ಗಳಲ್ಲೂ ಹಿಂದಿ ಹೇರಿಕೆಯನ್ನು ಚಾಳಿಯನ್ನು ಸಿಎಂ ಸಿದ್ದರಾಮಯ್ಯ ಅವರ ಸರ್ಕಾರವೂ ಮುಂದುವರಿಸಿದೆ.
ಕೆಎಸ್​ಆರ್​ಟಿಸಿ ಬಸ್​ಗಳ ಮಾರ್ಗ ಫಲಕಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್​ ಜೊತೆಗೆ ಹಿಂದಿಯನ್ನೂ ಬಳಸುವುದನ್ನು ಸಮರ್ಥಿಸಿಕೊಂಡು ಮಂಗಳೂರು-3ನೇ ಘಟಕದ ಡಿಪೋ ಮ್ಯಾನೇಜರ್​ ಉತ್ತರ ನೀಡಿದ್ದಾರೆ.
ಉತ್ತರ ಭಾರತದಿಂದ ಮಂಗಳೂರು ಕಡೆಗೆ ಬರುವ ಪ್ರಯಾಣಿಕರಿಗೆ ಕನ್ನಡ ಮತ್ತು ಇಂಗ್ಲೀಷ್​ ಭಾಷೆ ಬಾರದ್ದೇ ಇದ್ದಲ್ಲಿ ಅವರಿಗೆ ಅನುಕೂಲವಾಗಲು ನಮ್ಮ ರಾಷ್ಟ್ರಭಾಷೆ ಹಿಂದಿಯನ್ನು ಸೇರಿಸಿರುತ್ತಾರೆ 
ಎಂದು ಮಾರ್ಚ್​​ 7ರಂದು ಕೆಎಸ್​ಆರ್​ಟಿಸಿಗೆ ಸಲ್ಲಿಸಿದ್ದ ಆರ್​ಟಿಐ ಅರ್ಜಿಗೆ ಜೂನ್​ 1ರಂದು ಡಿಪೋ ಮ್ಯಾನೇಜರ್​ ಉತ್ತರಿಸಿದ್ದಾರೆ.
ಮೇ 20ರಂದು ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತ ಆರಂಭವಾಯಿತು. 
ವಿಧಾನಸಭಾ ಚುನಾವಣೆಯ ವೇಳೆ ಕನ್ನಡ ಅಸ್ಮಿತತೆಯನ್ನೂ ಕಾಂಗ್ರೆಸ್​ ಚುನಾವಣಾ ಅಸ್ತ್ರವಾಗಿಸಿಕೊಂಡಿತ್ತು.
ಆದರೆ ಅಧಿಕಾರಕ್ಕೆ ಬಂದ ಬಳಿಕವೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಸುಪರ್ದಿಗೆ ಬರುವ ಸಾರಿಗೆ ಇಲಾಖೆ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಘೋಷಿಸಿ ಉತ್ತರ ಭಾರತೀಯರ ಅನುಕೂಲಕ್ಕಾಗಿ ಮಾರ್ಗ ಫಲಕಗಳಲ್ಲಿ ಬಳಸುತ್ತಿರುವುದಾಗಿ ಸಮರ್ಥಿಸಿಕೊಂಡಿದೆ.