ಕೌನ್ ಬನೇಗಾ ಮುಖ್ಯಮಂತ್ರಿ.. ಸಿದ್ದು, ಡಿಕೆಶಿಯ ಬಲ ಏನು, ದೌರ್ಬಲ್ಯ ಏನು? – ವಿಶೇಷ ವರದಿ

ಸಾರ್.. ಕಾಂಗ್ರೆಸ್ ಗೆದ್ರೇ ನೀವೇನಂತೆ ಮುಖ್ಯಮಂತ್ರಿ.. ಹೌದಾ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದಾಗಲೆಲ್ಲ ಸಿದ್ದರಾಮಯ್ಯ ಅವರದ್ದು ಒಂದೇ ಉತ್ತರ.. ಚುನಾವಣೆ ನಂತರ ನಡೆಯಲಿರುವ ಪಕ್ಷದ ಶಾಸಕಾಂಗ ಸಭೆಯಲ್ಲಿ ಗೆದ್ದ ಅಭ್ಯರ್ರ್ಥಿಗಳು ನೂತನ ಮುಖ್ಯಮಂತ್ರಿ ಯಾರೆಂಬುದನ್ನು ಚುನಾಯಿಸಲಿದ್ದಾರೆ ಎಂದು ಉತ್ತರಿಸುತ್ತಿದ್ದರು.. ಇದೇ ಪ್ರಶ್ನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕೇಳಿದರೇ, ಮೊದಲು ಪಕ್ಷ ಗೆಲ್ಲಲು ಬಿಡಿ.. ಆಮೇಲೆ ಸಿಎಂ ಯಾರಾಗಬೇಕು ಎಂಬುದನ್ನು ತೀರ್ಮಾನಿಸೋಣ ಎನ್ನುತ್ತಿದ್ದರು.. ಇದೀಗ ಕಾಂಗ್ರೆಸ್ ಗೆದ್ದಾಗಿದೆ..ಈಗ ಎಲ್ಲರ ಪ್ರಶ್ನೆಯೂ ಒಂದೇ ಯಾರಾಗ್ತಾರೆ ಮುಖ್ಯಮಂತ್ರಿ ಎನ್ನುವುದು.. ಇದನ್ನು ನಿರ್ಧರಿಸಲೆಂದೇ ಇಂದು ಸಂಜೆ ಬೆಂಗಳೂರಿನಲ್ಲಿ ನೂತನ ಶಾಸಕರ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಚರ್ಚೆ ನಡೆಯುವುದು ಇಬ್ಬರ ಕುರಿತಂತೆಯೇ..

ಪಕ್ಷದ ಮೂಲಗಳ ಪ್ರಕಾರ ಕಾಂಗ್ರೆಸ ಪಕ್ಷದ ಮಾಸ್ ಲೀಡರ್, ಉತ್ತಮ ಆಡಳಿತದ ಅನುಭವ ಇರುವ ಸಿದ್ದರಾಮಯ್ಯಗೆ ಪಟ್ಟ ಕಟ್ಟಲಾಗುತ್ತದೆ. ಮೂರು ಅಥವಾ ನಾಲ್ಕು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗುತ್ತದೆ. ಒಕ್ಕಲಿಗ ಸಮುದಾಯದಿಂದ ಡಿಕೆ ಶಿವಕುಮಾರ್, ಲಿಂಗಾಯತ ಸಮುದಾಯದಿಂದ ಎಂಬಿ ಪಾಟೀಲ್, ಎಸ್​ಸಿ ಸಮುದಾಯದಿಂದ ಮಾಜಿ ಡಿಸಿಎಂ ಪರಮೇಶ್ವರ್, ಮುಸ್ಲಿಮ್ ಸಮುದಾಯದಿಂದ ಜಮೀರ್ ಅಹ್ಮದ್ ಅವರನ್ನು ಡಿಸಿಎಂ ಮಾಡಲು ಪಕ್ಷ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. ಆದರೆ, ಇದು ಎಷ್ಟರ ಮಟ್ಟಿಗೆ ಜಾರಿಯಾಗುತ್ತದೆಯೋ ಗೊತ್ತಿಲ್ಲ.

ಪ್ರಧಾನವಾಗಿ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಇದೆ. ಈಗ ಇಬ್ಬರು ನಾಯಕರ ಬಲಾಬಲ ಏನು? ಬಲಹೀನತೆಗಳು ಏನು ಎನ್ನುವುದನ್ನು ತಿಳಿಯೋಣ.

ಸಿದ್ದರಾಮಯ್ಯ

ರಾಜ್ಯ ರಾಜಕಾರಣದ ಮಾಸ್ ಲೀಡರ್.. ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ನೇತಾರ.. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಪ್ರಶ್ನೆಗೆ ಎಲ್ಲಾ ಸಮೀಕ್ಷೆಗಳಲ್ಲಿ ಮುಂಚೂಣಿಯಲ್ಲಿದ್ದ ಹೆಸರು ಸಿದ್ದರಾಮಯ್ಯ ಅವರದ್ದು ಮಾತ್ರ. ಶೇಕಡಾ 50ಕ್ಕೂ ಹೆಚ್ಚು ಮಂದಿ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಬಯಸುತ್ತಿದ್ದಾರೆ.

ದೇವರಾಜು ಅರಸು ನಂತರ ಐದು ವರ್ಷ ಪೂರ್ಣಾಡಳಿತ ನೀಡಿದ ಘನತೆ ಸಿದ್ದರಾಮಯ್ಯಗೆ ಸಲ್ಲುತ್ತದೆ. ಅಹಿಂದ ಸಮುದಾಯದ ಪ್ರಶ್ನಾತೀತ ಪ್ರತಿನಿಧಿಯಾದ ಸಿದ್ದರಾಮಯ್ಯ ಅವರು 200ರಲ್ಲಿ ಜನತಾ ಪರಿವಾರ ತೊರೆದು ಕಾಂಗ್ರೆಸ್ ಸೇರಿ ಪಕ್ಷವನ್ನು ಯಶಸ್ವಿಯಾಗಿ ಅಧಿಕಾರಕ್ಕೆ ತಂದಿದ್ದರು. ಐದು ವರ್ಷ ಕಳಂಕರಹಿತ ಆಡಳಿತವನ್ನು ನೀಡಿದ್ದು ಸಿದ್ದರಾಮಯ್ಯ ಹೆಗ್ಗಳಿಕೆ.

ಮಾತು ಸ್ವಲ್ಪ ಕಠಿಣ ಎನಿಸಿದರು ಸಿದ್ದರಾಮಯ್ಯ ಅವರದ್ದು ಮಾತೃಹೃದಯಿ.. ಬಡವರು, ಹಿಂದುಳಿದರ ಏಳಿಗೆಗೆ ಸದಾ ದುಡಿಯುವ ನೇತಾರ.. ಇವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ತುಂಬಾ ಕಡಿಮೆ. ಇಡೀ ಕರ್ನಾಟಕದಾದ್ಯಂತ ಜನಪ್ರಿಯತೆ ಹೊಂದಿರುವ ಏಕೈಕ ನಾಯಕ ಸಿದ್ದರಾಮಯ್ಯ ಎಂದರೇ ಅತಿಶಯೋಕ್ತಿ ಏನಲ್ಲ.

ಸಿದ್ದರಾಮಯ್ಯ ಬಲ – ಅಪಾರ ರಾಜಕೀಯ ಅನುಭವ, ಪಕ್ಷ ಮತ್ತು ಸರ್ಕಾರವನ್ನು ಮುನ್ನಡೆಸುವ ಚಾಣಾಕ್ಷ, ಸಿದ್ದರಾಮಯ್ಯನವರ ಪರ ನಿರ್ಣಯಗಳು, ಸಿದ್ದರಾಮಯ್ಯಗೆ ಇರುವ ಅಪಾರ ಜನಪ್ರಿಯತೆ

ಸಿದ್ದರಾಮಯ್ಯ ಬಲಹೀನತೆ – ಆಧುನಿಕ ರಾಜಕೀಯಗಳು, ವ್ಯೂಹಗಳಿಗೆ ದೂರ, ಎಐಸಿಸಿ ಅಧ್ಯಕ್ಷರ ಸಹಕಾರ ಕಡಿಮೆ

ಡಿಕೆ ಶಿವಕುಮಾರ್

ಕನಕಪುರ ಬಂಡೆ ಎಂದೇ ಅಭಿಮಾನಿಗಳ ವಲಯದಲ್ಲಿ ಫೇಮಸ್.. ಕರ್ನಾಟಕ ಕಾಂಗ್ರೆಸ್​ಗೆ ಹೊಸ ವೇಗ ತಂದುಕೊಟ್ಟವರು. ಅಹ್ಮದ್ ಪಟೇಲ್ ಗೆಲ್ಲಿಸಲು ಹೈಕಮಾಂಡ್ ಸೂಚನೆ ಮೇರೆಗೆ ರೆಸಾರ್ಟ್ ಪಾಲಿಟಿಕ್ಸ್ ಅಕೌನನ್ನು ಯಶಸ್ವಿಯಾಗಿ ನಿಭಾಯಿಸಿದವರು. ಅಕ್ರಮ ಸಂಪತ್ತಿನ ಗಳಿಕೆ ಆರೋಪದ ಮೇಲೆ ಸತತ ದಾಳಿಗಳಿಗೆ ಒಳಗಾದವರು. ಒಮ್ಮೆ ತಿಹಾರ್ ಜೈಲಿಗೆ ಹೋಗಿಬಂದವರು. ಟೀಕೆಗಳಿಗೆ ಎದೆಗುಂದದೇ ಆಕ್ರಮಣಕಾರಿ ರಾಜಕೀಯ ಮಾಡಿದವರು. 27 ವರ್ಷಕ್ಕೆ ಶಾಸಕರಾದ ಡಿಕೆ ಶಿವಕುಮಾರ್ ಈವರೆಗೂ ಸೋತಿದ್ದೇ ಇಲ್ಲ. ಈಗಲೂ 1.20 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಡಿಕೆಶಿ ಬಲ – ಯುವ ನಾಯಕತ್ವಕ್ಕೆ ಪ್ರತಿನಿಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಕೃಪಾಶೀರ್ವಾದವಿದೆ. ಪಕ್ಷಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸುವ ಚತುರ.

ಬಲಹೀನತೆ – ಬೆಂಗಳೂರು, ಹಳೆ ಮೈಸೂರು ಭಾಗದಲ್ಲಷ್ಟೇ ಸೀಮಿತ ನಾಯಕತ್ವ.. ಸಿದ್ದರಾಮಯ್ಯ ರೀತಿ ಮಾಸ್ ಲೀಡರ್ ಅಲ್ಲ. ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವಷ್ಟು ಸಹನೆ ಇಲ್ಲ. ಎಲ್ಲರೊಳಗೂ ಬೆರೆಯಲ್ಲ. ನಾನು ಎನ್ನುವ ಅಹಮಿಕೆ, ಧಾಡಸಿತನ.. ಹಿರಿಯ ನಾಯಕರ ಸಹಕಾರ ಪಡೆಯುವುದು ಕಷ್ಟ