ಇಂದು ಬಿಡುಗಡೆಯಾಗದ ಕೋಟಿಗೊಬ್ಬ-3 ಚಿತ್ರ: ಕ್ಷಮೆ ಕೋರಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ನಿಗದಿಯಂತೆ ಗುರುವಾರ ಬೆಳಗ್ಗೆ ಮೊದಲ ಪ್ರದರ್ಶನ ಕಾಣಲಿಲ್ಲ. ಚಿತ್ರದ ನಿರ್ಮಾಪಕ ಹಾಗೂ ಹೂಡಿಕೆದಾರ ನಡುವಿನ ಜಗಳದಿಂದ ಚಿತ್ರದ ಬಿಡುಗಡೆ ದಿನಾಂಕ ಒಂದು ದಿನ ಮುಂದಕ್ಕೆ ಹೋಗಿದೆ.

ದುನಿಯಾ ವಿಜಯ್‌ ನಟನೆಯ ಸಲಗ ಹಾಗೂ ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ-3 ಚಿತ್ರಗಳು ಒಂದೇ ದಿನ ಪರದೆಗೆ ಬರಲು ಸಿದ್ಧವಾಗಿದ್ದವು. ಆದರೆ ನಿರ್ಮಾಪಕ ಮತ್ತು ಹೂಡಿಕೆದಾರರ ಜಗಳದಿಂದಾಗಿ ಇದು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ.

ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಇಂದು ಚಿತ್ರ ಬಿಡುಗಡೆಯಾಗದ್ದಕ್ಕೆ ಕಾರಣ ಹೇಳಿ ಕ್ಷಮೆ ಕೋರಿದ ಬೆನ್ನಲ್ಲೇ, ನಟ ಕಿಚ್ಚ ಸುದೀಪ್ ವೀಡಿಯೋ ಮಾಡಿ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

ಅಭಿಮಾನಿಗಳಿಗೆ ಇಂದು ನಿರಾಶೆ ಮೂಡಿಸಿದ್ದಕ್ಕೆ ಸ್ವತಃ ಕಿಚ್ಚ ಸುದೀಪ್ ವೀಡಿಯೋ ಮಾಡಿದ್ದಾರೆ. ಈ ವೀಡಿಯೋದಲ್ಲಿ ಮಾತನಾಡಿರುವ ಅವರು, ಚಿತ್ರದ ನಿರ್ಮಾಪಕ ಮತ್ತು ಹೂಡಿಕೆದಾರರ ನಡುವವಿನ ಜಗಳದಿಂದ ಚಿತ್ರ ಬಿಡುಗಡೆ ತಡವಾಗಿದೆ. ಈ ಸಮಸ್ಯೆಗೆ ಕಾರಣಕರ್ತರಾದವರ ಪರವಾಗಿ ನಾನು ವೈಯಕ್ತಿಕವಾಗಿ ಕ್ಷಮೆ ಯಾಚಿಸುತ್ತೇನೆ. ಇದರಲ್ಲಿ ಚಿತ್ರಮಂದಿರಗಳಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ ಎಂದು ಸುದೀಪ್‌ ತಿಳಿಸಿದ್ದಾರೆ.

ನಾನೂ ಕೂಡ ನನ್ನ ಚಿತ್ರವೊಂದು ಎರಡು ವರ್ಷಗಳ ನಂತರ ಬಿಡುಗಡೆ ಆಗುತ್ತಿರುವ ಬಗ್ಗೆ, ನಿಮ್ಮಷ್ಟೇ ಉತ್ಸುಕನಾಗಿದ್ದೆ. ನಿಮ್ಮೆಲ್ಲರ ಪ್ರೀತಿ ಹಾಗೂ ತಾಳ್ಮೆಯೇ ನನ್ನ ಅತಿ ದೊಡ್ಡ ಶಕ್ತಿ. ಆದಷ್ಟು ಬೇಗ ಚಿತ್ರದ ಪ್ರದರ್ಶನದ ಬಗ್ಗೆ ಮಾಹಿತಿ ಕೊಡುತ್ತೇನೆ ಹಾಗೂ ಮುಂದಿನ ನನ್ನ ಚಿತ್ರಗಳಿಗೆ ಹೀಗಾಗದ ಹಾಗೆ ನೋಡಿಕೊಳ್ಳುತ್ತೇನೆ. ಅಲ್ಲಿಯವರೆಗು ಯಾವ ರೀತಿಯ ಹಾನಿಗೆ ಕಾರಣರಾಗದೆ, ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇನೆ ಎಂದು ಸುದೀಪ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here