ಕೊಳ್ಳೇಗಾಲ ಉಪ ಚುನಾವಣೆಯಲ್ಲಿ ಶಾಸಕ ಎನ್ ಮಹೇಶ್ ಹವಾ

ಕೊಳ್ಳೇಗಾಲ ನಗರಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದು, ಹಾಲಿ ಶಾಸಕ ಎನ್ ಮಹೇಶ್ ಪ್ರಾಬಲ್ಯ ಮೆರೆದಿದ್ದಾರೆ. ಪರಿಣಾಮ, ಕಾಂಗ್ರೆಸ್ ಮತ್ತು ಬಿಎಸ್ಪಿ ಪಕ್ಷಗಳು ತೀವ್ರ ಮುಖಭಂಗಕ್ಕೆ ಒಳಗಾಗಿವೆ.

7 ಸ್ಥಾನಗಳಿಗೆ ನಡೆದಿದ್ದ ಉಪ ಚುನಾವಣೆಯಲ್ಲಿ ಬರೋಬ್ಬರಿ ಆರು ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಒಂದರಲ್ಲಿ ಮಾತ್ರ ಕಾಂಗ್ರೆಸ್ ಜಯಗಳಿಸಿದೆ.

6ನೇ ವಾರ್ಡ್ ನಲ್ಲಿ ಬಿಜೆಪಿಯ ಮಾನಸ, 7ನೇ ವಾರ್ಡ್    ಬಿಜೆಪಿಯ ನಾಸೀರ್ ಷರೀಫ್, 13ನೇ ವಾರ್ಡ್ ನಲ್ಲಿ ಬಿಜೆಪಿಯ ಪವಿತ್ರ, 21ನೇ ವಾರ್ಡ್ ನಲ್ಲಿ ಬಿಜೆಪಿಯ   ಪ್ರಕಾಶ್, 25ನೇ ವಾರ್ಡ್ ನಲ್ಲಿ ಬಿಜೆಪಿಯ ರಾಮಕೃಷ್ಣ, 26ನೇ ವಾರ್ಡ್ ನಲ್ಲಿ ಬಿಜೆಪಿಯ ನಾಗಸುಂದ್ರಮ್ಮ  ಗೆಲುವು ಸಾಧಿಸಿದ್ದಾರೆ.

ಉಳಿದಂತೆ 2ನೇ ವಾರ್ಡ್ ನಲ್ಲಿ ಮಾತ್ರ ಕಾಂಗ್ರೆಸ್   ಅಭ್ಯರ್ಥಿ ಭಾಗ್ಯ ಗೆಲುವು ಕಂಡಿದ್ದಾರೆ.

ಎನ್ ಮಹೇಶ್ ಬೆಂಬಲಿಗರ ಸಂಭ್ರಮ ಮುಗಿಲುಮುಟ್ಟಿದೆ. ವಿಜಯೋತ್ಸವ ಆಚರಣೆಯಲ್ಲಿ ಬೆಂಬಲಿಗರು ನಿರತರಾಗಿದ್ದಾರೆ.

ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಬಿಎಸ್ಪಿಯಿಂದ ಉಚ್ಚಾಟನೆಗೊಂಡು ಬಿಜೆಪಿ ಸೇರಿದ್ದರು. ಈ ಹಂತದಲ್ಲಿ ನಡೆದಿದ್ದ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದ ಬಿಎಸ್ಪಿಯ ಏಳು ಸದಸ್ಯರು ಅನರ್ಹಗೊಂಡಿದ್ದರು. ಈ ಸ್ಥಾನಗಳಿಗೆ ಮೂರು ದಿನಗಳ ಹಿಂದೆ ಚುನಾವಣೆ ನಡೆದಿತ್ತು.

ಶಾಸಕ ಎನ್ ಮಹೇಶ್ ಜೊತೆ ಗುರುತಿಸಿಕೊಂಡಿದ್ದ 7 ಸದಸ್ಯರಿಗೂ ಬಿಜೆಪಿ ಟಿಕೆಟ್ ನೀಡಿತ್ತು. ಈ ಏಳು ಮಂದಿ ಪೈಕಿ ಆರು ಮಂದಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಎನ್ ಮಹೇಶ್ ಯಶಸ್ವಿ ಆಗಿದ್ದಾರೆ.

LEAVE A REPLY

Please enter your comment!
Please enter your name here