ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಕರ್ನಾಟಕದ ಜನತೆಗೆ ಹೊಸ ಶಾಕ್ ಎದುರಾಗಿದೆ. ಕೇಂದ್ರದ ಜಿಎಸ್ಟಿ ಪರಿಷ್ಕೃತ ನಿಯಮಗಳ ಜಾರಿ ಹಿನ್ನೆಲೆಯಲ್ಲಿ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದ್ದು, ಸೋಮವಾರದಿಂದಲೇ ಹೊಸ ದರಗಳು ಜಾರಿಗೆ ಬರಲಿವೆ.
ನಂದಿನಿ ಉತ್ಪನ್ನಗಳ ನೂತನ ಪರಿಷ್ಕೃತ ದರ ಪಟ್ಟಿಯನ್ನು ಕೆಎಂಎಫ್ ಬಿಡುಗಡೆ ಮಾಡಿದೆ. ಹಾಲು ಹೊರತಾಗಿ ಇತರೆ ಉತ್ಪನ್ನಗಳ ದರದಲ್ಲಿ ಹೆಚ್ಚಳ ಆಗಿದೆ.
ಯಾವುದರ ಮೇಲೆ ಎಷ್ಟು ರೂಪಾಯಿ ಏರಿಕೆ?
10 ರೂಪಾಯಿ 200 ml ನಂದಿನಿ ಮೊಸರಿನ ಬೆಲೆ 2 ರೂ. ಹೆಚ್ಚಳ ಮಾಡಲಾಗಿದ್ದು, ಒಟ್ಟು ಬೆಲೆ 12 ರೂ.ಗೆ ತಲುಪಿದೆ. 22 ರೂಪಾಯಿಯಿದ್ದ ಅರ್ಧ ಲೀಟರ್ ಮೊಸಲಿನ ಪ್ಯಾಕೆಟ್ ಈಗ 24 ರೂ. ಆಗಿದೆ. 1 ಲೀಟರ್ ಮೊಸರು ಪ್ಯಾಕೇಟ್ 3 ರೂ. ಏರಿಕೆಯೊಂದಿಗೆ 46 ರೂ. ಆಗಿದೆ. ಇನ್ನು 200 ml ಮಜ್ಜಿಗೆ ಪ್ಯಾಕೆಟ್ 7 ರಿಂದ 8 ರೂ. ಆಗಿದೆ. ಟೆಟ್ರಾ ಪ್ಯಾಕ್ 10 ರಿಂದ 11 ರೂ. ಹಾಗೂ ಪೆಟ್ ಬಾಟಲ್ ಬೆಲೆ 12 ರಿಂದ 13 ರೂ. ಆಗಿದೆ. ಇನ್ನು 200 ml ನಂದಿನಿ ಲಸ್ಸಿ ಮೇಲೆ 1 ರೂಪಾಯಿ ಏರಿಸಿ ಹೊಸ ದರಗಳ ಪಟ್ಟಿಯನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಹೊರಡಿಸಿದೆ.
ಇನ್ನು ನಂದಿನಿ ಹಾಲಿನ ಬೆಲೆಯನ್ನೂ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಎಂಎಫ್ ಹಾಲಿನ ದರವನ್ನು ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಿದೆ. ಗುರುವಾರ ನಡೆದ ಕೆಎಂಎಫ್ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೆಎಂಎಫ್ ಪ್ರಸ್ತಾವನೆಗೆ ಸರಕಾರ ಒಪ್ಪಿಗೆ ನೀಡಿದರೆ, ಪ್ರಸ್ತುತ 37 ರೂ.ಗಳಲ್ಲಿರುವ ಒಂದು ಲೀಟರ್ ನಂದಿನಿ ಟೋನ್ಡ್ ಹಾಲು 40 ರೂ.ಗೆ ಏರಬಹುದು. ಕೆಎಂಎಫ್ ಪ್ರಕಾರ, ರೈತರಿಗೆ 2.5 ರೂ ಹೆಚ್ಚುವರಿ ಸಿಗುತ್ತದೆ. ಪ್ರಸ್ತಾವನೆಯನ್ನು ಅಂಗೀಕರಿಸಿದರೆ ಮಾರಾಟ ಮಾಡುವ ಪ್ರತಿ ಲೀಟರ್ ಹಾಲಿನಿಂದ 50 ಪೈಸೆಯನ್ನು ಒಕ್ಕೂಟಗಳು ಉಳಿಸಿಕೊಳ್ಳುತ್ತವೆ.
ಎಸ್ಟಿ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಹಾಲು ಸಂಸ್ಕರಣೆ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ಸಿದ್ಧವಾಗಿದೆ. ಕರ್ನಾಟಕದಲ್ಲಿ ಸಕ್ರಿಯವಾಗಿರುವ ಖಾಸಗಿ ಡೇರಿ ಕಂಪನಿಗಳಾದ ದೊಡ್ಲಾ ಮತ್ತು ಹೆರಿಟೇಜ್ ಸಹ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಿಸಲಿವೆ ಎಂದು ತಿಳಿದುಬಂದಿದೆ.