ಪ್ರತಿಕ್ಷಣ ಸ್ಪೆಷಲ್ – ಅಂದು ಅಪ್ಪ – ಇಂದು ಮಗ..! ಕತ್ತಿ ಕುಟುಂಬಕ್ಕೆ ಹೃದಯಾಘಾತ ಎಂಬ ಕಂಟಕ!

ಅದು 1985ರ ಮಾರ್ಚ್ 20.. ರಾಮಕೃಷ್ಣ ಹೆಗಡೆಯವರ ನೇತೃತ್ವದ ಜನತಾ ಸರ್ಕಾರ ಅಸ್ತಿತ್ವಕ್ಕೆ ಬಂದ ಮೂರನೇ ದಿನ. ಬೆಳಗ್ಗೆ 9 ಗಂಟೆಗೆ ಸದನ ಆರಂಭವಾಯಿತು. ಕರಾವಾರದ ಶಾಸಕ ಎಸ್ ಆರ್ ನಾಯಕ ತಮ್ಮ ಮೇಲಾದ ಹಲ್ಲೆ ಬಗ್ಗೆ ಪ್ರಸ್ತಾಪ ಮಾಡಿದ್ದರು. ಗೃಹ ಸಚಿವರಾಗಿದ್ದ ಬಿ ರಾಚಯ್ಯನವರು ಪೊಲೀಸ್ ಭದ್ರತೆ ನೀಡುವ ಅಭಯ ನೀಡುತ್ತಿದ್ದರು. ಎಲ್ಲಾ ಗೊತ್ತಿದ್ದೂ ಗೊತ್ತಿಲ್ಲದವರಂತೆ ವರ್ತಿಸುವ ಅಧಿಕಾರಿಗಳ ಮೇಲೇನು ಕ್ರಮ ಎಂದು ಎಸ್ ಬಂಗಾರಪ್ಪ ಸಚಿವರನ್ನು ಪ್ರಶ್ನೆ ಮಾಡುತ್ತಿದ್ದರು. ಈ ಸಂದರ್ಭದಲ್ಲೇ ಸದನದಲ್ಲಿ ಡಾಕ್ಟರ್ ಡಾಕ್ಟರ್ ಎಂಬ ಕೂಗೆದ್ದಿತ್ತು.

ನೋಡನೋಡುವಷ್ಟರಲ್ಲಿ ಕುಳಿತ ಸ್ಥಳದಲ್ಲಿಯೇ ಹುಕ್ಕೇರಿಯ ನೂತನ ಶಾಸಕ, ಜನತಾ ಪಕ್ಷದ ನಾಯಕ ವಿಶ್ವನಾಥ ಮಲ್ಲಪ್ಪ ಕತ್ತಿ ಹೃದಯಾಘಾತದಿಂದ ಕುಸಿದಿದ್ದರು. ಡಾ. ಜೀವರಾಜ ಆಳ್ವ ಸದನದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಹತ್ತೇ ನಿಮಿಷದಲ್ಲಿ ಅವರಿಲ್ಲ ಎಂಬ ಸುದ್ದಿ ಬರ ಸಿಡಿಲಿನಂತೆ ಬಂದೆರಗಿತ್ತು. ಇಡೀ ಸದನದಲ್ಲಿ ಶೋಕದಲ್ಲಿ ಮುಳುಗಿತ್ತು. ಇಂಥಾ ಘಟನೆ ಸದನದಲ್ಲಿ ಆಗಿದ್ದು ಇದೆ ಮೊದಲು.

ವಿಶ್ವನಾಥ್ ಮಲ್ಲಪ್ಪ ಕತ್ತಿ

ಇದಕ್ಕೂ ಮೊದಲೇ, ಅಂದರೇ ಸಂಸ್ಥಾ ಕಾಂಗ್ರೆಸ್ ನಿಂದ ಪರಿಷತ್ ಗೆ ಸಹಕಾರಿ ಕ್ಷೇತ್ರದಿಂದ ಆಯ್ಕೆಯಾದ ಸಂದರ್ಭದಲ್ಲಿಯೇ ವಿಶ್ವನಾಥ್ ಮಲ್ಲಪ್ಪ ಕತ್ತಿ ಅವರಿಗೆ ಒಮ್ಮೆ ಲಘು ಹೃದಯಾಘಾತ ಆಗಿತ್ತು. ಆಗ ಆಪರೇಷನ್ ಮಾಡಿಸಿಕೊಳ್ಳಲು ವಿದೇಶಕ್ಕೆ ಹೋಗಬೇಕಿತ್ತು. ಹಲವು ಕಾರಣಗಳಿಂದಾಗಿ ವಿಶ್ವನಾಥ ಮಲ್ಲಪ್ಪ ಕತ್ತಿ ಹಾರ್ಟ್ ಆಪರೇಷನ್ ಮಾಡಿಸಿಕೊಂಡಿರಲಿಲ್ಲ.

ಅಪ್ಪನ ಹಾದಿಯಲ್ಲೇ ನಡೆದ ಉಮೇಶ್ ಕತ್ತಿ

ತಂದೆಯ ಅಕಾಲಿಕ ಸಾವಿನಿಂದ ತೆರವಾಗಿದ್ದ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ 25ವರ್ಷದ ಉಮೇಶ್ ಕತ್ತಿ ವಿಧಾನಸಭೆಗೆ ಆರಿಸಿ ಬಂದಿದ್ದರು. ಆರು ಬಾರಿ  ಪಕ್ಷ  ಬದಲಿಸಿ ಎಂಟು ಬಾರಿ  ಶಾಸಕರಾಗಿ, ಸಚಿವರಾಗಿ ಉಮೇಶ್ ಕತ್ತಿ ಕೆಲಸ ಮಾಡಿದ್ದರು. ಈ ಮಧ್ಯೆ ಉಮೇಶ್ ಕತ್ತಿ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಸ್ಟೆಂಟ್ ಕೂಡ ಅಳವಡಿಸಲಾಗಿತ್ತು. ಆದರೆ, ನಿನ್ನೆ ರಾತ್ರಿ ಉಮೇಶ್ ಕತ್ತಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಬೆಂಗಳೂರಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.

ಉಮೇಶ್ ಕತ್ತಿ

ಹುಟ್ಟೂರು ಬಸವನಬಾಗೇವಾಡಿಯ ಕಬ್ಬಿನ ಹೊಲದಲ್ಲಿ ತಮ್ಮ ತಂದೆ ವಿಶ್ವನಾಥ ಕತ್ತಿಯವರ ಸಮಾಧಿ ಪಕ್ಕದಲ್ಲಿಯೇ ಉಮೇಶ್ ಕತ್ತಿ ಶಾಶ್ವತವಾಗಿ ಪವಡಿಸಲಿದ್ದಾರೆ.

LEAVE A REPLY

Please enter your comment!
Please enter your name here