ಪುತ್ತೂರಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಥರ್ಡ್​ ಡಿಗ್ರಿ ಥಳಿತ – ಪೊಲೀಸರ ವರ್ತನೆಗೆ ಕಟೀಲ್​ ಖಂಡನೆ

Nalin Kumar Kateel

ಪುತ್ತೂರಿನಲ್ಲಿ ಬಿಜೆಪಿ ಸೋಲಿನ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಮತ್ತು ಸಂಸದ ಡಿ ವಿ ಸದಾನಂದಗೌಡ ಅವರ ವಿರುದ್ಧ ಪೋಸ್ಟರ್​ ಹಾಕಿದ್ದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ.

ಈ ಇಬ್ಬರು ನಾಯಕರ ಪೋಸ್ಟರ್​ಗೆ ಚಪ್ಪಲಿ ಹಾರ ಹಾಕಿ ಘೋಷಣೆ ಬರೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಕರೆದುಕೊಂಡು ಹೋದ ಪುತ್ತೂರು ಪೊಲೀಸರು ಚರ್ಮ ಕಿತ್ತು ಹೋಗುವಂತೆ ಬಾರಿಸಿದ್ದಾರೆ. ಥರ್ಡ್​ ಡಿಗ್ರಿ ಟ್ರೀಟ್​​ಮೆಂಟ್​ ನೀಡಿದ್ದಾರೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಪ್ರತಿಕ್ರಿಯಿಸಿದ್ದಾರೆ.

ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ. ಉನ್ನತ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.