ಬ್ರಹ್ಮಕುಮಾರಿ ಸಹೋದರಿಯರ ಅನುಯಾಯಿ ಆಗಿರುವ ಗಂಡ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೊಂದಿಲ್ಲ ಎಂಬ ಕಾರಣಕ್ಕೆ ಆತನ ವಿರುದ್ಧ ಪತ್ನಿ ವರದಕ್ಷಿಣೆ ಕಿರುಕುಳ ತಡೆ ಕಾನೂನಿನಡಿ ದಾಖಲಿಸಿದ್ದ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಬ್ರಹ್ಮಕುಮಾರಿ ಸಹೋದರಿಯರ ಅನುಯಾಯಿಯಾಗಿರುವ ಗಂಡ ಅವರ ವೀಡಿಯೋಗಳನ್ನೇ ಯಾವಾಗಲೂ ನೋಡುತ್ತಿರುತ್ತಾನೆ ಮತ್ತು ಪತ್ನಿ ಜೊತೆಗೆ ಲೈಂಗಿಕ ಕ್ರಿಯೆಗೆ ಆಸಕ್ತಿ ಹೊಂದಿಲ್ಲ ಎನ್ನುವುದು ಭಾರತೀಯ ದಂಡ ಸಂಹಿತೆ ಕಲಂ 498ಎ ಅಡಿಯಲ್ಲಿ ಮಹಿಳೆಗೆ ಕ್ರೂರತೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಗಂಡನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದಾವೆಯನ್ನು ವಜಾಗೊಳಿಸಿದೆ.
ಒಂದು ವೇಳೆ ಪ್ರಕರಣಗಳು ಮೇಲ್ನೋಟಕ್ಕೆ ಹೌದೆಂದು ಕಂಡುಬರದೇ ಇದ್ದಲ್ಲಿ ಆ ಪ್ರಕರಣಗಳನ್ನು ಮುಂದುವರಿಸಲು ಅನುಮತಿ ನೀಡಬಾರದು ಎಂದು ವೈವಾಹಿಕ ಪ್ರಕರಣಗಳ ಬಗ್ಗೆ ಸುಪ್ರೀಂಕೋರ್ಟ್ ಕಾಲಕಾಲಕ್ಕೂ ನಿರ್ದೇಶನ ನೀಡಿದೆ
ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಗಂಡನ ವಿರುದ್ಧ ಯಾವುದೇ ಅಂಶಗಳು ಕಂಡುಬಂದಿಲ್ಲ. ಹೀಗಾಗಿ ಒಂದು ವೇಳೆ ಕಿರುಕುಳದ ಆರೋಪದಡಿಯಲ್ಲಿ ಪ್ರಕರಣವನ್ನು ಮುಂದುವರಿಸಲು ಅನುಮತಿಸಿದರೆ ಅದು ಆಗ ಕಾನೂನು ಪ್ರಕ್ರಿಯೆಯ ದುರ್ಬಳಕೆ ಆಗುತ್ತದೆ
ಎಂದು ಹೈಕೋರ್ಟ್ ಹೇಳಿದೆ.
ದಂಪತಿ ಜೊತೆಗೆ ಅತ್ತೆ-ಮಾವ ಇರದ ಕಾರಣ ಅವರ ವಿರುದ್ಧವೂ ವರದಕ್ಷಿಣೆ ಕಿರುಕುಳದ ಯಾವುದೇ ಅಂಶಗಳಿಲ್ಲ, ಗಂಡನ ವಿರುದ್ಧವೂ ಪತ್ನಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿರಲಿಲ್ಲ.
ತಾನು ಗಂಡನ ಬಳಿಗೆ ಸಮೀಪಿಸಿದಾಗಲ್ಲೆಲ್ಲ ಅವರು ಬ್ರಹ್ಮಕುಮಾರಿ ಸಹೋದರರಿಯರ ವೀಡಿಯೋಗಳನ್ನು ನೋಡುತ್ತಿದ್ದರು ಮತ್ತು ತಮಗೆ ದೈಹಿಕ ಸಂಪರ್ಕದಲ್ಲಿ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದರು
ಎಂದು ದೂರಿದ್ದ ಪತ್ನಿ ಗಂಡನ ವಿರುದ್ಧ ವರದಕ್ಷಿಣೆ ತಡೆ ಕಾನೂನಿನ ಅಡಿಯಲ್ಲಿ ದೂರು ದಾಖಲಿಸಿದ್ದಳು. ಮದುವೆ ಆದ ಕೇವಲ 28 ದಿನಕ್ಕೆ ಇವರಿಬ್ಬರ ಮದುವೆ ಮುರಿದು ಬಿದ್ದಿತ್ತು.
ADVERTISEMENT
ADVERTISEMENT