ಧ್ವನಿವರ್ಧಕ ಮೂಲಕ ಆಜಾನ್​ಗೆ ನಿರ್ಬಂಧ ಕೋರಿ ಸಲ್ಲಿಸಿದ್ದ PIL ಅರ್ಜಿ ವಜಾ

ಆಜಾನ್ (Azaan)​ ವೇಳೆ ಧ್ವನಿವರ್ಧಕ (Loud Speaker) ಬಳಸದಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್ (Karnataka High Court) ತಿರಸ್ಕರಿಸಿದೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ದಿನದಲ್ಲಿ ಐದು ಬಾರಿ ಧ್ವನಿವರ್ಧಕದ ಮೂಲಕ ಆಜಾನ್​ ಕೂಗುವುದಿಂದ ಅನ್ಯಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂದು ಹೇಳಿ ಪಿಐಎಲ್​ ಸಲ್ಲಿಕೆ ಆಗಿತ್ತು.
ಬೆಂಗಳೂರಿನ ಭುವನೇಶ್ವರಿ ನಗರದ ಚಂದ್ರಶೇಖರ್​ ಎನ್ನುವವರು ಅರ್ಜಿ ಸಲ್ಲಿಸಿದ್ದರು.
ಧ್ವನಿವರ್ಧಕದ ಮೂಲಕ ಆಜಾನ್​ ಕೂಗುವುದರಿಂದ ಅನ್ಯ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್​ನ ಹಂಗಾಮಿ ನ್ಯಾಯಮೂರ್ತಿ ಅಲೋಕ್​ ಆರಾಧೆ ಅವರ ಪೀಠ ಒಪ್ಪಿಲ್ಲ.
ಅರ್ಜಿದಾರರು ಮತ್ತು ಅನ್ಯ ಧರ್ಮದಲ್ಲಿ ನಂಬಿಕೆಯುಳ್ಳವರು ತಮ್ಮ ಧರ್ಮವನ್ನು ಆಚರಿಸಲು ಹಕ್ಕಿದೆ. ಆಜಾನ್​ ಎನ್ನುವುದು ಪ್ರಾರ್ಥನೆ ಮಾಡುವಂತೆ ಮುಸ್ಲಿಮರಿಗೆ ನೀಡಲಾಗುವ ಕರೆ. ಆಜಾನ್​ ಇಸ್ಲಾಂನ ಮೂಲಭೂತ ಆಚರಣೆ ಎಂದು ಅರ್ಜಿದಾರರೇ ಹೇಳಿದ್ದಾರೆ. ಆದರೆ ಆಜಾನ್​ನಿಂದ ಅರ್ಜಿದಾರರು ಮತ್ತು ಇತರೆ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗುತ್ತದೆ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ
ಎಂದು ಹೈಕೋರ್ಟ್​ ಹೇಳಿದೆ.
ಇದೇ ವೇಳೆ ಧ್ವನಿವರ್ಧಕ ಬಳಕೆ ಬಗ್ಗೆ ವಿಧಿಸಲಾಗಿರುವ ನಿಯಮಗಳ ಉಲ್ಲಂಘನೆ ಬಗ್ಗೆ 8 ವಾರಗಳಲ್ಲಿ ವರದಿ ಸಲ್ಲಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಿದೆ.

LEAVE A REPLY

Please enter your comment!
Please enter your name here