ನವದೆಹಲಿ: ದ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (ಸಿಐಎಸ್ ಸಿಐ) ಶನಿವಾರ ಐಸಿಎಸ್ ಇ 10ನೇ ತರಗತಿ ಮತ್ತು ಐಎಸ್ ಸಿ 12ನೇ ತರಗತಿಯ ಫಲಿತಾಂಶವನ್ನು ಘೋಷಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು cisce.org or results.cisce.org. ಪರಿಶೀಲಿಸಬಹುದಾಗಿದೆ.
ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣದ ಹಿನ್ನೆಲೆಯಲ್ಲಿ ಸಿಐಎಸ್ ಸಿಇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ರದ್ದುಪಡಿಸಿತ್ತು. ಪರ್ಯಾಯ ಮೌಲ್ಯಮಾಪನ ನೀತಿಯ ಆಧಾರದ ಮೇಲೆ ಮಂಡಳಿಯು ಫಲಿತಾಂಶವನ್ನು ಘೋಷಿಸಿರುವುದಾಗಿ ವರದಿ ತಿಳಿಸಿದೆ.
ಈ ಹಿಂದಿನ ವರ್ಷದಂತೆ ಐಸಿಎಸ್ ಇ ಮತ್ತು ಐಎಸ್ ಸಿ ಉತ್ತರಪತ್ರಿಕೆಯ ಮರು ಪರಿಶೀಲನೆಯ ಆಯ್ಕೆ ಈ ವರ್ಷ ಲಭ್ಯವಿರುವುದಿಲ್ಲ. ಯಾಕೆಂದರೆ ವಿದ್ಯಾರ್ಥಿಗಳಿಗೆ ಇಂಪ್ಯೂಟೆಡ್ ಮಾರ್ಕ್ಸ್ ನೀಡಲಾಗಿದೆ. ಒಂದು ವೇಳೆ ಅಂಕಗಳಲ್ಲಿ ವ್ಯತ್ಯಾಸ ಇದ್ದರೆ ಮಾತ್ರ ಅದನ್ನು ಸರಿಪಡಿಸಲು ಅವಕಾಶ ಇದೆ ಎಂದು ಮಂಡಳಿ ತಿಳಿಸಿದೆ.
ವಿದ್ಯಾರ್ಥಿ/ವಿದ್ಯಾರ್ಥಿನಿಯ ಅಂಕಗಳಲ್ಲಿ ವ್ಯತ್ಯಾಸ ಇದ್ದರೆ ಅದನ್ನು ಲಿಖಿತವಾಗಿ ಶಾಲೆಗೆ ಆಕ್ಷೇಪಣೆ ಸಲ್ಲಿಸಬೇಕು. ಇದರಲ್ಲಿ ಸಂಪೂರ್ಣ ಮಾಹಿತಿ ನೀಡಿರಬೇಕು. ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಂಕಗಳಲ್ಲಿನ ವ್ಯತ್ಯಾಸ ಹೊರತುಪಡಿಸಿ ಬೇರೆ ಯಾವುದೇ ಆಕ್ಷೇಪಗಳಿಗೆ ಅವಕಾಶ ಇಲ್ಲ ಎಂದು ಸಿಐಎಸ್ ಸಿಇ ಸ್ಪಷ್ಟಪಡಿಸಿದೆ.