BIG BREAKING: ರಾಜ್ಯದ ಜನತೆಗೆ ಬಿಜೆಪಿ ಸರ್ಕಾರದ ದೀಪಾವಳಿ ಉಡುಗೊರೆ – ವಿದ್ಯುತ್​ ದರ ಭಾರೀ ಹೆಚ್ಚಳ

ಜನಸಾಮಾನ್ಯರಿಗೆ ರಾಜ್ಯದ ಬಿಜೆಪಿ ಸರ್ಕಾರ ಮತ್ತೆ ಬರೆ ಹಾಕಿದೆ. ಅಕ್ಟೋಬರ್​ 1ರಿಂದ ವಿದ್ಯುತ್​ ದರ ಮತ್ತೆ ಏರಿಕೆ ಆಗಿದೆ. ಈ ಮೂಲಕ ಏಪ್ರಿಲ್​ನಿಂದ ಇಲ್ಲಿಯವರೆಗೆ ಮೂರು ಬಾರಿ ದರ ಹೆಚ್ಚಳ ಮಾಡಿದೆ.
ಎಲ್ಲಿ ಎಷ್ಟು..?
ಬೆಸ್ಕಾಂ (Bescom) ವ್ಯಾಪ್ತಿಯಲ್ಲಿ ಬರುವ ವಿದ್ಯುತ್​ ಬಳಕೆದಾರರು ಪ್ರತಿ ಯುನಿಟ್​ಗೆ 43 ಪೈಸೆಯಷ್ಟು ಹೆಚ್ಚಳ ಮಾಡಲಾಗಿದೆ. ಹೆಸ್ಕಾಂ (Hescom) ವ್ಯಾಪ್ತಿಯಲ್ಲಿ 35 ಪೈಸೆ, ಜೆಸ್ಕಾಂ (Gescom) ವ್ಯಾಪ್ತಿಯಲ್ಲಿ 35 ಪೈಸೆ, ಸಿಇಎಸ್​ಸಿ (CESC) ವ್ಯಾಪ್ತಿಯಲ್ಲಿ 34 ಪೈಸೆ ಮತ್ತು ಮೆಸ್ಕಾಂ (Mescom) ವ್ಯಾಪ್ತಿಯಲ್ಲಿ ಪ್ರತಿ ಯುನಿಟ್​ಗೆ 24 ಪೈಸೆಯಷ್ಟು ದರ ಏರಿಕೆ ಮಾಡಲಾಗಿದೆ.
ಅಕ್ಟೋಬರ್​ 1ರಿಂದ ಅನ್ವಯ ಆಗುವಂತೆ ದರ ಹೆಚ್ಚಳ (Power Tariff Hike) ಜಾರಿಗೆ ಸೆಪ್ಟೆಂಬರ್​ 19ರಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಅನುಮೋದನೆ (KERC) ನೀಡಿದೆ.
ಏಕಕಾಲಕ್ಕೆ ಎರಡು ದರ ಹೆಚ್ಚಳ ಪಾವತಿ:
ಈಗ ಮತ್ತೆ ದರ ಹೆಚ್ಚಳದ ಮೂರನೇ ಆದೇಶ ಜಾರಿ ಆಗಿದೆ. ಇದರೊಂದಿಗೆ ಅಕ್ಟೋಬರ್​ 1ರಿಂದ ರಾಜ್ಯದ ಜನತೆ ಜುಲೈ 1ರಿಂದ ಡಿಸೆಂಬರ್​ 31ರವರೆಗೆ ಎರಡನೇ ಬಾರಿಗೆ ಆದ ದರ ಹೆಚ್ಚಳದ ಜೊತೆಗೆ ಅಕ್ಟೋಬರ್​ 1ರಿಂದ ಆಗಿರುವ ಮೂರನೇ ದರ ಹೆಚ್ಚಳದ ಮೊತ್ತವನ್ನೂ ಸೇರಿಸಿ ಪಾವತಿಸಬೇಕಾಗುತ್ತದೆ. ಅಕ್ಟೋಬರ್​ 1ರಿಂದ ಡಿಸೆಂಬರ್​ ಅಂತ್ಯದವರೆಗೆ ಎರಡು ಬೆಲೆ ಏರಿಕೆಯ ಮೊತವನ್ನೂ ನೀಡಬೇಕಾಗುತ್ತದೆ.
ಅಂದರೆ ಬೆಸ್ಕಾಂ ವ್ಯಾಪ್ತಿಯಲ್ಲಿ (31+43 ಪೈಸೆ = 74 ಪೈಸೆ), ಹೆಸ್ಕಾಂ ( 27+35= 62 ಪೈಸೆ ) ಜೆಸ್ಕಾಂ (26+35=61 ಪೈಸೆ) ಮೆಸ್ಕಾಂ (24 + 21 ಪೈಸೆ = 45 ಪೈಸೆ) ಮತ್ತು ಸಿಇಎಸ್​ಸಿ ವ್ಯಾಪ್ತಿಯಲ್ಲಿ ಪ್ರತಿ ಯುನಿಟ್​ಗೆ (19+19= 38 ಪೈಸೆಯಷ್ಟು) ಪಾವತಿ ಮಾಡಬೇಕಾಗುತ್ತದೆ.
ಇದೇ ವರ್ಷದ ಏಪ್ರಿಲ್​, ಜೂನ್​ ತಿಂಗಳಲ್ಲೂ ವಿದ್ಯುತ್​ ದರ ಏರಿಕೆ ಆಗಿತ್ತು. ಕಳೆದ 6 ತಿಂಗಳ ಅವಧಿಯಲ್ಲಿ ವಿದ್ಯುತ್​ ದರ ಪ್ರತಿ ಯುನಿಟ್​ಗೆ  ಮೂರು ಬಾರಿ 1 ರೂಪಾಯಿಯಷ್ಟು ದುಬಾರಿ ಆಗಿದೆ.
ಏಪ್ರಿಲ್​ 1ರಿಂದ ರಾಜ್ಯದಲ್ಲಿ ವಿದ್ಯುತ್​ ದರ ಪ್ರತಿ ಯುನಿಟ್​ಗೆ 35 ಪೈಸೆಯಷ್ಟು ಹೆಚ್ಚಳ ಆಗಿತ್ತು. ಆ ಬಳಿಕ ಜುಲೈ 1ರಿಂದ ಡಿಸೆಂಬರ್​ 31ರವರೆಗೆ ಅನ್ವಯ ಆಗುವಂತೆ ಬೆಸ್ಕಾಂ – 31 ಪೈಸೆ, ಹೆಸ್ಕಾಂ – 27 ಪೈಸೆ, ಜೆಸ್ಕಾಂ – 26 ಪೈಸೆ, ಸಿಇಎಸ್​ಸಿ – 19 ಪೈಸೆ ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯುನಿಟ್​​ಗೆ 21 ಪೈಸೆ ದರ ಹೆಚ್ಚಳ ಆಗಿತ್ತು.

LEAVE A REPLY

Please enter your comment!
Please enter your name here