ಬೆಂಗಳೂರು: ಈ ಸರ್ಕಾರ ಹೇಳೋದೊಂದು ಮಾಡೋದೊಂದು ಈ ಸರ್ಕಾರಕ್ಕೆ ಕಣ್ಣಿಲ್ಲ, ಕಿವಿಯೂ ಇಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ಕೊರೊನಾ ವೇಳೆ ಕಾರ್ಮಿಕರ ಪರವಾಗಿ ನಿಲ್ಲುವಲ್ಲಿ ಈ ಸರ್ಕಾರ ವಿಫಲವಾಗಿದ್ದು, ಕಾರ್ಮಿಕರಿಗೆ ಐದು ಸಾವಿರ ಹಣ ಕೊಡಲು ಆಗಲಿಲ್ಲ. ಇಡೀ ದೇಶದ ಭ್ರಷ್ಟ ಆಡಳಿತ ರಾಜ್ಯ ಬಿಜೆಪಿ ಸರ್ಕಾರದಲ್ಲಿದ್ದು, ಔಷಧ, ಬೆಡ್ ಗಾಗಿ ಕ್ಯೂ ನಿಲ್ಲಿಸಿದ ಖ್ಯಾತಿ ಬಿಜೆಪಿ ಸರ್ಕಾರದ್ದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಾಕ್ಡೌನ್ನಿಂದ ಕಂಗಾಲಾದ ಜನರ ನೆರವಿಗೆ ಬರಬೇಕು ಎಂದು ಯಡಿಯೂರಪ್ಪ ಅವರ ಮನೆಬಾಗಿಲು ತಟ್ಟಿದ್ದು ನಾವು. ಬಡವರಿಗೆ ಜೀವನ ಕನಿಷ್ಠ ₹ 10 ಸಾವಿರ ಕೊಡಿ ಅಂತ ವಿನಂತಿಸಿದ್ದೆವು. ಅವರು ಒಂದು ಸಲ ಮಾತ್ರ ಐದು ಸಾವಿರ ರೂಪಾಯಿ ಕೊಡುವುದಾಗಿ ಘೋಷಿಸಿದ್ದರು.
ದೇಶದ ಜನರ ನೆರವಿಗಾಗಿ ₹ 20 ಲಕ್ಷ ಕೋಟಿ ಕೊಡ್ತೀವಿ ಅಂತ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಇಲ್ಲಿರುವ ಹೆಣ್ಮಕ್ಕಳಲ್ಲಿ ಒಬ್ಬರಾದರೂ ಹೇಳಿ, ನಿಮಗೆ ದುಡ್ಡು ಸಿಕ್ತಾ’ ಎಂದು ಪ್ರಶ್ನಿಸಿದರು. ಜನರಿಗೆ ಉಚಿತವಾಗಿ ಲಸಿಕೆ ಕೊಡಬೇಕು ಎಂದು ಒತ್ತಾಯಿಸಿದ್ದು ನಾವು.
ಸರ್ಕಾರ ದುಡ್ಡು ಇಲ್ಲ ಎಂದಾಗ ಕಾರ್ಯಕರ್ತರ ನೆರವಿನಿಂದ ನಾವು ಶಾಸಕರು ₹ 100 ಕೋಟಿ ಕೊಡ್ತೀವಿ ಅಂತ ಹೇಳಿದ್ದೆವು. ಆಸ್ಪತ್ರೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು ಹೋಗಲು ಸರ್ಕಾರ ಯತ್ನಿಸುತ್ತಿದ್ದಾಗ ನಾವು ವಿರೋಧಿಸಿದೆವು. ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಇಲ್ಲ ಎಂದು ಆರೋಪಿಸಿದರು.