ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ ಹಾಡು ಕೆನಡಾದಲ್ಲಿ ಸಂಸತ್ತಿನಲ್ಲಿ ಮೊಳಗಿದೆ.
ಕೆನಡಾ ಸಂಸತ್ತಿನಲ್ಲಿ ಸಂಸದರಾಗಿರುವ ತುಮಕೂರು ಜಿಲ್ಲೆಯ ಚಂದನ್ ಆರ್ಯ ಅವರು ಕನ್ನಡದಲ್ಲಿ ಮಾತಾಡಿದ್ದಾರೆ. ತಮ್ಮ ಭಾಷಣದ ವೀಡಿಯೋವನ್ನು ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
`ಮಾನ್ಯ ಸಭಾಪತಿ, ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಮಾತಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ವ್ಯಕ್ತಿಯೊಬ್ಬ ಕೆನಡಾದಲ್ಲಿ ಸಂಸತ್ ಸದಸ್ಯನಾಗಿ ಆಯ್ಕೆ ಆಗಿ ಮತ್ತು ಕನ್ನಡದಲ್ಲಿ ಮಾತಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ.
ಕೆನಡಾ ದೇಶದ ಕನ್ನಡಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟçಕವಿ ಕುವೆಂಪು ಬರೆದಿರುವ ಮತ್ತು ನಟ ಸೌರ್ವಭಾಮ ಡಾ ರಾಜ್ಕುಮಾರ್ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಹೇಳಿಕೆಯನ್ನು ಮುಗಿಸುತ್ತಿದ್ದೇನೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು. ಧನ್ಯವಾದಗಳು ಸಭಾಪತಿ’
ಎಂದು ಸಂಸದ ಚಂದನ್ ಆರ್ಯ ಕನ್ನಡದಲ್ಲೇ ತಮ್ಮ ಭಾಷಣ ಮಾಡಿದ್ದಾರೆ.
ಸಂಸದ ಚಂದನ್ ಆರ್ಯ ಅವರ ಭಾಷಣ ಮುಗಿಯುತ್ತಿದ್ದಂತೆ ಉಳಿದ ಸಂಸದರು ಅಭಿನಂದಿಸಿದರು.
ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿರುವ ಚಂದನ್ ಆರ್ಯ ಅವರು ಕೆನಡಾದ ಕೆಳಮನೆ ಹೌಸ್ ಆಫ್ ಕಾಮನ್ಸ್ನಲ್ಲಿ ಸಂಸದರಾಗಿದ್ದಾರೆ. ಕೆನಡಾದ ಲಿಬರಲ್ ಪಕ್ಷದ ಇವರು ನೇಪಿಯನ್ ಕ್ಷೇತ್ರದ ಸಂಸದರು.