ಲೈಂಗಿಕ ಕಿರುಕುಳ ಆರೋಪ: ಸಾಕ್ಷ್ಯ ಕೊಡಿ – ನಟಿ ಶೃತಿ ಹರಿಹರನ್​ಗೆ ಕೋರ್ಟ್​ ನೋಟಿಸ್​

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಾಕ್ಷ್ಯ ಸಲ್ಲಿಕೆ ಮಾಡುವಂತೆ ನಟಿ ಶೃತಿ ಹರಿಹರನ್​ ಅವರಿಗೆ ಬೆಂಗಳೂರಿನ ನ್ಯಾಯಾಲಯ ಸೂಚಿಸಿದೆ.

ಸಾಕ್ಷ್ಯ ಸಲ್ಲಿಸುವಂತೆ ನಟಿಗೆ ಸೂಚಿಸಿ ಬೆಂಗಳೂರಿನ 8ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್​ ಕೋರ್ಟ್​ ನೋಟಿಸ್​ ಜಾರಿ ಮಾಡಿದೆ.

2018ರ ಅಕ್ಟೋಬರ್​ ಮೀ ಟೂ ಚಳುವಳಿ (ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ) ತೀವ್ರಗೊಂಡಿದ್ದ ಹೊತ್ತಲ್ಲಿ ಶೃತಿ ಅವರೂ ಕೂಡಾ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ 4 ಪುಟಗಳ ಪತ್ರವನ್ನು ಬರೆದು ನಟ ಅರ್ಜುನ್​ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ವಿಸ್ಮಯ ಸಿನಿಮಾದ ಚಿತ್ರೀಕರಣಕ್ಕೂ ಮೊದಲು ವೇಳೆ ತಮ್ಮನ್ನು ಬರಸೆಳೆದು ಅಪ್ಪಿಕೊಂಡರು, ಅಸಭ್ಯವಾಗಿ ವರ್ತಿಸಿ ತಮ್ಮ ಹಿಂಬದಿಗೆ ಕೈ ಹಾಕಿದರು. ಶೂಟಿಂಗ್​ ಸೆಟ್​ನಲ್ಲಿ 50 ಜನರ ಎದುರಲ್ಲಿ ಕೃತ್ಯ ನಡೆದಿತ್ತು ಎಂದು ನಟಿ ಶೃತಿ ಅವರು ಆರೋಪಿಸಿದ್ದರು.

ಇದಾದ ಬಳಿಕ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಶೃತಿ ಆರೋಪದ ಬಗ್ಗೆ ತನಿಖೆ ನಡೆಸಿದ್ದ ಕಬ್ಬನ್​ ಪಾರ್ಕ್​ ಪೊಲೀಸರು 2021ರ ಡಿಸೆಂಬರ್​ನಲ್ಲಿ ಕೋರ್ಟ್​ಗೆ ಬಿ ರಿಪೋರ್ಟ್​ (ಆರೋಪ ಸಾಬೀತಾಗಿಲ್ಲ ಎಂದು ವರದಿ) ಸಲ್ಲಿಸಿದ್ದರು.

ಜನವರಿ 13, 2022ರಲ್ಲಿ ಕೋರ್ಟ್​ ಪೊಲೀಸರ ಸಲ್ಲಿಸಿದ್ದ ವರದಿಯನ್ನು ಸ್ವೀಕಾರ ಮಾಡಿತ್ತು. ಆದರೆ ಬಿ ರಿಪೋರ್ಟ್​ ಪ್ರಶ್ನಿಸಿ ಶೃತಿ ಹರಿಹರನ್​ ಅವರು 8ನೇ ಎಸಿಎಂಎಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.