ಉತ್ತರ ಪ್ರದೇಶದ ಮಹಿಳಾ ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟ ಬಡಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ವ್ಯಾಪಕ ಪ್ರಚಾರದಲ್ಲಿರುವ ಈ ವೀಡಿಯೊಗಳನ್ನು ಸೆಪ್ಟೆಂಬರ್ 16 ರಂದು ಸಹರಾನ್ಪುರದಲ್ಲಿ ಬಾಲಕಿಯರ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಕೆಲವು ಆಟಗಾರರು ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.
ವೈರಲ್ ವಿಡಿಯೋ ವೈರಲ್ ಆದ ನಂತರ ರಾಜ್ಯ ಸರ್ಕಾರ ಸಹರಾನ್ಪುರ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಅವರನ್ನು ಅಮಾನತುಗೊಳಿಸಿದೆ.
ಜಿಲ್ಲಾ ಕ್ರೀಡಾ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ನಾನು ತನಿಖೆಗೆ ಆದೇಶಿಸಿದ್ದೇನೆ ಮತ್ತು ಸಂಬಂಧಿಸಿದವರು ಮೂರು ದಿನಗಳಲ್ಲಿ ವರದಿಯನ್ನು ಸಲ್ಲಿಸುತ್ತಾರೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಹರಾನ್ಪುರದ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಹೇಳಿದ್ದಾರೆ.
ಕ್ರೀಡಾಂಗಣದಲ್ಲಿ ಕೆಲ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ವೇಳೆಯೆ ಮಳೆ ಬಂತು. ಆದ್ದರಿಂದ ಊಟ ಇಡಲು ಬೇರೆ ಸ್ಥಳ ದೊರಕಲಿಲ್ಲ. ಆದ್ದರಿಂದ, ಈಜುಕೊಳ ಪ್ರದೇಶದಲ್ಲಿ ಊಟದ ವ್ಯವಸ್ಥೆ ಮಾಡಿದ್ದೆವು ಎಂದು ಜಿಲ್ಲಾ ಕ್ರೀಡಾಧಿಕಾರಿ ಅನಿಮೇಶ್ ಸಕ್ಸೇನಾ ಹೇಳಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ, ವಿದ್ಯಾರ್ಥಿಗಳು ಶೌಚಾಲಯದಲ್ಲಿ ಮೂತ್ರಾಲಯದ ಬಳಿ ವಿವಿಧ ಪಾತ್ರೆಗಳಿಂದ ಅನ್ನ ಮತ್ತು ಸಾಂಬಾರ ಪದಾರ್ಥಗಳನ್ನು ಬಡಿಸುತ್ತಿರುವುದನ್ನು ವೀಡಿಯೊಗಳು ತೋರಿಸುತ್ತವೆ.
ರಾಜ್ಯಮಟ್ಟದ ಕಬಡ್ಡಿ ಆಟಗಾರರಿಗೆ ಅಗೌರವ ತೋರಿದ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ ಹಲವು ರಾಜಕೀಯ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಬಿಜೆಪಿಯು ವಿವಿಧ ಪ್ರಚಾರಗಳಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತದೆ, ಆದರೆ ಆಟಗಾರರಿಗೆ ಸರಿಯಾದ ವ್ಯವಸ್ಥೆ ಮಾಡಲು ಹಣವಿಲ್ಲ, ಸ್ಥಳವಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.