ADVERTISEMENT
ಮೈಸೂರು ಜಿಲ್ಲೆ ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಅವರಿಗೆ ಈ ಬಾರಿ ಮತ್ತೆ ಬಿಜೆಪಿ ಟಿಕೆಟ್ ಸಿಗುತ್ತಾ..?
ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದ ವೇಳೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಶ್ವನಾಯಕ ಶ್ರೀ ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಿದ ಮೂರು ಫೋಟೋಗಳನ್ನು ರಾಮದಾಸ್ ಅವರು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರನ್ನು ಎಸ್ ಎ ರಾಮದಾಸ್, ಚಾಮರಾಜ ಕ್ಷೇತ್ರದ ಶಾಸಕ ಎಲ್ ನಾಗೇಂದ್ರ ಮತ್ತು ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಅವರು ಸ್ವಾಗತಿಸಿದರು.
ಮೋದಿಯವರು ವಿಮಾನದಿಂದ ಇಳಿಯುತ್ತಿದ್ದಂತೆ ಬೆನ್ನುಬಗ್ಗಿಸಿ ರಾಮದಾಸ್ ಅವರು ಸ್ವಾಗತಿಸಿದರು. ಆ ಬಳಿಕ ರಾಮದಾಸ್ ಅವರು ಮೋದಿಯವರ ಕೈಹಿಡಿದು ತಮ್ಮ ಮುಖವನ್ನಿಟ್ಟು ನಮಸ್ಕರಿಸಿದರು.
ಕಳೆದ ಬಾರಿ ಮೈಸೂರಿಗೆ ಬಂದಿದ್ದಾಗ ಮೋದಿಯವರು ರಾಮದಾಸ್ ಅವರನ್ನು ತಮ್ಮ ಬಳಿಗೆ ಕರೆದು ಅವರ ಬೆನ್ನಿಗೆ ಪ್ರೀತಿಯಿಂದ ಗುದ್ದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮೈಸೂರು ಜಿಲ್ಲಾ ಬ್ರಾಹ್ಮಣರ ಸಂಘದ ಪದಾಧಿಕಾರಿಗಳು ಈ ಬಾರಿ ಕೆ ಆರ್ ಕ್ಷೇತ್ರದಿಂದ ರಾಮದಾಸ್ ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಮಾಡಿದ್ದರು. ರಾಮದಾಸ್ ಅವರು ಕೆಲಸ ಮಾಡಿಲ್ಲ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದ್ದರು.
ಕೆ ಆರ್ ಕ್ಷೇತ್ರದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್ ಅವರ ಪರ ಬ್ರಾಹ್ಮಣರ ಸಂಘ ಲಾಬಿ ನಡೆಸಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೂಡಾ ಈ ಬಾರಿ ರಾಮದಾಸ್ ಅವರಿಗೆ ಟಿಕೆಟ್ ತಪ್ಪಿಸಿ ತಮ್ಮ ಆಪ್ತವಲಯದಲ್ಲಿರುವ ರಾಜೀವ್ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಜಾರಿಗೊಳಿಸಿದ್ದಾರೆ.
ಆದರೆ ಈಗ ರಾಮದಾಸ್ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿದರೆ ಈ ಬಾರಿಯೂ ಮೋದಿಯವರ ಅಭಯದ ಕಾರಣದಿಂದ ಕೆ ಆರ್ ಕ್ಷೇತ್ರದಲ್ಲಿ ಮತ್ತೆ ರಾಮದಾಸ್ ಅವರಿಗೆನೇ ಟಿಕೆಟ್ ಸಿಗುತ್ತಾ ಎಂಬ ಕುತೂಹಲ ಹೆಚ್ಚಿಸಿದೆ.
ADVERTISEMENT